"ಬಾಂಬ್ ನಾಗ"ನ ಮನೆಯಲ್ಲಿ ಪತ್ತೆಯಾಯ್ತು ಹಳೆಯ ನೋಟಿನ ಹೊಳೆ!
ಬೆಂಗಳೂರು, ಎ.14: ಉದ್ಯಮಿಯೊಬ್ಬರ ಅಪಹರಣ ಮತ್ತು ಕೊಲೆ ಬೆದರಿಕೆ ಪ್ರಕರಣದ ಸಂಬಂಧ ಬಿಬಿಎಂಪಿ ಮಾಜಿ ಸದಸ್ಯ ವಿ.ನಾಗರಾಜ್ ಯಾನೆ ಬಾಂಬ್ ನಾಗನ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಹಳೇ ನೋಟಿನ ಕೋಟ್ಯಂತರ ರೂಪಾಯಿ ಖಜಾನೆಯೇ ಸಿಕ್ಕಿದೆ.
ಶುಕ್ರವಾರ ಮುಂಜಾನೆ 5 ಗಂಟೆಯ ಸುಮಾರಿಗೆ ನಗರದ ಶ್ರೀರಾಮಪುರ ಬಳಿಯ ಹನುಮಂತನಪುರದ 2ನೆ ಮುಖ್ಯರಸ್ತೆಯಲ್ಲಿರುವ ಆರೋಪಿ ಬಾಂಬ್‌ನಾಗ ಮಾಲಕತ್ವದ ಮೂರು ಮನೆ ಹಾಗೂ ಒಂದು ವಾಣಿಜ್ಯ ಕಟ್ಟಡದ ಮೇಲೆ 50ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದಾಗ 10 ಕೋಟಿಗೂ ಅಧಿಕ ಹಳೆ ನೋಟಿನ ಕಂತೆಗಳ ಜತೆಗೆ 2 ಡ್ರಾಗರ್ ಮತ್ತು 3 ಮಚ್ಚುಗಳು ಪತ್ತೆಯಾಗಿವೆ. ಮನೆಯಲ್ಲಿದ್ದ ಟಿಸ್ಟಾಂಡ್, ಅಕ್ವೇರಿಯಂ, ಹೋಮ್‌ಥೀಯೇಟರ್ ಕೆಳಗೂ ಕೋಟ್ಯಂತರ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅದೇ ರೀತಿ, ವಾಣಿಜ್ಯ ಕಟ್ಟಡದಲ್ಲಿ ಸ್ನೇಹ ಸೇವಾ ಸಮಿತಿ ಎಂಬ ಹೆಸರಿನ ಸಂಸ್ಥೆ ಇದ್ದು, 3ನೆ ಮಹಡಿಯಲ್ಲಿ ನಾಗನ ಪ್ರತ್ಯೇಕ ಕಚೇರಿ ಮೇಲೂ ದಾಳಿ ನಡೆಸಲಾಗಿದೆ.
ದಾಳಿಗೆ ಕಾರಣ ಏನು?: ಮಾ.18ರಂದು ರಿಯಲ್ಎಸ್ಟೇಟ್ ಉದ್ಯಮಿ ಉಮೇಶ್ ಎಂಬವರನ್ನು ಅಪಹರಣ ಮಾಡಿ ಬಾಂಬ್ ನಾಗ ಮನೆಗೆ ಕರೆತಂದು 50 ಲಕ್ಷ ರೂ. ವಸೂಲಿ ಮಾಡಿದ್ದ ಎನ್ನಲಾಗಿದೆ. ಆದರೆ, ಈ ಬಗ್ಗೆ ಉಮೇಶ್ ಯಾವುದೇ ದೂರು ನೀಡಿರಲಿಲ್ಲ. ಬಳಿಕ ಎ.7ರಂದು ಇಲ್ಲಿನ ಹೆಣ್ಣೂರು ಪೊಲೀಸ್ ಠಾಣೆಗೆ ತೆರಳಿ "ನನಗೆ ಕೆಲವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ" ಎಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಇಂದು ಮುಂಜಾನೆ ಪೊಲೀಸರು ದಾಳಿ ನಡೆಸಿದಾಗ ಹಳೆಯ ನೋಟುಗಳಿರುವುದು ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗ ಪರಾರಿ: ಪೊಲೀಸರು ಕಟ್ಟಡದ ಮೊದಲ ಮಹಡಿಗೆ ಹೋದಾಗ, ಅಲ್ಲಿ ಮಹಿಳೆಯರು ಮಾತ್ರ ವಾಸವಿರುವುದು ಗೊತ್ತಾಗಿದೆ. ಕಟ್ಟಡದಲ್ಲಿನ ಪ್ರತಿಯೊಂದು ಕೊಠಡಿಗಳಿಗೂ ಬೀಗ ಹಾಕಲಾಗಿತ್ತು. ದಾಳಿ ಮಾಡಿರುವ ಪೊಲೀಸರಿಗೆ ಬೀಗ ಮುರಿಯುವುದೇ ಸವಾಲಿನ ಕೆಲಸವಾಗಿತ್ತು.
ಯಾರು ನಾಗ?: ಶ್ರೀರಾಮಪುರ ಠಾಣೆಯಲ್ಲಿ 2011ರಲ್ಲಿ ಬಾಂಬ್ ನಾಗನ ಹೆಸರನ್ನು ರೌಡಿಪಟ್ಟಿಯಿಂದ ತೆಗೆದು ಹಾಕಿದ್ದರು. ನೆಲಮಂಗಲ, ಶ್ರೀರಾಮಪುರ, ದಾಬಸ್ ಪೇಟೆ ಸೇರಿ ಹಲವು ಕಡೆ ಈತನ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ರೌಡಿಶೀಟರ್ ಹಿನ್ನೆಲೆ ಹೊಂದಿದ್ದ ಬಾಂಬ್ ನಾಗ ಶ್ರೀರಾಮಪುರ ಸುತ್ತಮುತ್ತ ಸಮಾಜಸೇವಕನಾಗಿದ್ದು, ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ನಿಂತು ವಿಜಯಶಾಲಿಯಾಗಿದ್ದ. ಮತ್ತೊಂದು ಬಾರಿ ನಾಗ ಮತ್ತು ಆತನ ಪತ್ನಿ ಲಕ್ಷ್ಮೀ ಕೂಡ ಎರಡು ಕ್ಷೇತ್ರಗಳಿಂದ ಗೆಲುವು ಸಾಧಿಸಿದ್ದರು. ಬಿಬಿಎಂಪಿ ರಚನೆಯಾದ ನಂತರವೂ ಚುನಾವಣೆಗೆ ನಿಂತಿದ್ದ ಬಾಂಬ್ ನಾಗ ಸೋಲು ಕಂಡಿದ್ದ. ರಾಜಕಾರಣಿಯಾದ ನಂತರವೂ ಆತ ತನ್ನ ರೌಡಿ ಕೃತ್ಯವನ್ನು ನಿಲ್ಲಿಸಿರಲಿಲ್ಲ ಎನ್ನಲಾಗಿದೆ.
36 ಸಿಸಿಟಿವಿ: ಪೊಲೀಸರ ಸರ್ಪಗಾವಲಿನ ನಡುವೆಯೂ ಬಾಂಬ್ ನಾಗ ಪರಾರಿಯಾಗಲು ಆತನ ಮನೆಯಲ್ಲಿದ್ದ ಸಿಸಿ ಕ್ಯಾಮೆರಾಗಳು ಸಹಾಯ ಮಾಡಿವೆ. ತನ್ನ ಮನೆ ಹಾಗೂ ಅಕ್ಕಪಕ್ಕದ ನಿವಾಸಗಳ ಮೇಲೆ ಸರಿಸುಮಾರು 36 ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಂಡಿದ್ದಾನೆ. ಪೊಲೀಸರು ತನ್ನ ಮನೆಯನ್ನು ಸುತ್ತುವರಿದಿರುವುದನ್ನು ಸಿಸಿ ಕ್ಯಾಮರಾದಲ್ಲಿ ವೀಕ್ಷಿಸಿದ ನಾಗ ಕಟ್ಟಡದಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮಂಚದಲ್ಲಿ 14.80 ಕೋಟಿ ಹಣ: ಬಾಕ್ಸ್ ರೀತಿಯ ಮಂಚದಲ್ಲಿ ಕೋಟಿಗಟ್ಟಲೆ ಹಣವನ್ನು ಕೂಡಿಟ್ಟಿದ್ದಿರುವುದಾಗಿ ಗೊತ್ತಾಗಿದ್ದು, 10ಕ್ಕೂ ಹೆಚ್ಚು ಚೀಲಗಳಲ್ಲಿ 500 ಮತ್ತು 1 ಸಾವಿರ ರೂ.ಮುಖಬೆಲೆಯ 14.80 ಕೋಟಿ ರೂ.ಮೊತ್ತದಷ್ಟು ಹಳೇ ನೋಟುಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಶ್ನೆಗೆ ಪತ್ನಿಯ ವ್ಯಂಗ್ಯ ಉತ್ತರ
ಮನೆಯಲ್ಲಿದ್ದ ಕೋಟ್ಯಂತರ ರೂಪಾಯಿ ಹಳೇ ನೋಟು ಮತ್ತು ನಾಗ ತಲೆಮಾರೆಸಿಕೊಂಡಿರುವ ಬಗ್ಗೆ ಆತನ ಪತ್ನಿ ಲಕ್ಷ್ಮೀ ನಾಗರಾಜ್‌ಗೆ ಪೊಲೀಸರು ಪ್ರಶ್ನಿಸಿದರೆ, ಆಕೆ ವ್ಯಂಗ್ಯವಾಗಿ ಉತ್ತರಿಸಿದ್ದಾರೆ.
ಪೊಲೀಸ್: ನಾಗ ಎಲ್ಲಿದ್ದಾನೆ?
ಲಕ್ಷ್ಮೀ: ನೀವು ಯಾಕೆ ಇರೋದು ಹುಡುಕಿಕೊಳ್ಳಿ.
ಪೊಲೀಸ್: ಮನೆಯಲ್ಲಿ ಅಷ್ಟೊಂದು ದುಡ್ಡು ಹೇಗೆ ಬಂತು?
ಲಕ್ಷ್ಮೀ: ನನಗೇನು ಗೊತ್ತು. ನೀವೇ ತಂದಿಟ್ಟರಬಹುದು.
ಪೊಲೀಸ್: ನಾಗ ಎಲ್ಲಿ ಹೋದ ಹೇಳಮ್ಮ?
ಲಕ್ಷ್ಮೀ: ನಾನೇನು ಬಚ್ಚಿಟ್ಟುಕೊಂಡಿದ್ದೇನಾ? ಹುಡುಕಿಕೊಳ್ಳಿ ನೀವೇ..