ಬಿಎಸ್ಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ
ಬೆಂಗಳೂರು, ಎ.14: ವೈಚಾರಿಕವೆಬ ಅಸ್ತ್ರದಿಂದ ಜಾತಿ ವಿನಾಶಕ್ಕೆ ಹೋರಾಡಿದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಜೀವಂತವಾಗಿಟ್ಟುಕೊಳ್ಳುವ ಕೆಲಸವಾಗಬೇಕು ಎಂದು ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಆರ್.ಮುನಿಯಪ್ಪ ಹೇಳಿದರು.
ಶಿವಾಜಿನಗರದ ಬಿಎಸ್ಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೆ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕಾರಣಿಗಳು ಅಂಬೇಡ್ಕರ್ ಅವರ ಹೆಸರನ್ನು ಮತ ಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ ವಿನಃ ನೈಜ ಗೌರವ ಸಲ್ಲಿಸುತ್ತಿಲ್ಲ. ವಿಚಾರದ ಮೇಲೆ ನಂಬಿಕೆ ಇಟ್ಟಿದ್ದ ಅಂಬೇಡ್ಕರ್ ಚಿಂತನೆ ಇಂದು ಎಲ್ಲರಿಗೂ ಮಾರ್ಗದರ್ಶನವಾಗಬೇಕು. ತುಳಿತಕ್ಕೊಳಗಾದ ಸಮುದಾಯದ ಬಗ್ಗೆ ಅಂಬೇಡ್ಕರ್ ಅವರಿಗೆ ಕಾಳಜಿ ಇದ್ದುದ್ದರಿಂದಲೇ ಅವರು ಜಾತಿ ವಿನಾಶಕ್ಕೆ ಒತ್ತುಕೊಟ್ಟು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಕ್ಕಾಗಿ ಹಾತೊರೆಯುತ್ತಿದ್ದರು. ಆದರೆ, ಇಂದು ಅವರ ಚಿಂತನೆಗಳನ್ನು ರೂಢಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಬಿ.ಕಮಲನಾಭನ್, ಪ್ರಧಾನ ಕಾರ್ಯದರ್ಶಿ ಹೆಣ್ಣೂರು ಲಕ್ಷ್ಮೀ ನಾರಾಯಣ್, ನಾಹೀದಾ ಸೇರಿ ಪ್ರಮುಖರು ಹಾಜರಿದ್ದರು.