ಅಂದು ಡೆಲಿವರಿ ಬಾಯ್...ಇಂದು ಬಹು ಕೋಟ್ಯಾಧಿಪತಿ!

Update: 2017-04-16 08:50 GMT

ಬೆಂಗಳೂರು,ಎ.16: ಕೇವಲ 12 ವರ್ಷಗಳ ಹಿಂದೆ ಕೊರಿಯರ್ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿದ್ದ ಆಂಬೂರು ಅಯ್ಯಪ್ಪ ಇಂದು ಪ್ರಮುಖ ಆನ್‌ಲೈನ್ ಮಾರಾಟ ಸಂಸ್ಥೆ ಫ್ಲಿಪ್‌ಕಾರ್ಟ್‌ನ ಬಹು ಮಿಲಿಯಾಧಿಪತಿ ಉದ್ಯೋಗಿ! ಕಳೆದ 12 ವರ್ಷಗಳಲ್ಲಿ ಅವರು ಸಾಗಿ ಬಂದ ದಾರಿ ಕುತೂಹಲಕಾರಿಯಾಗಿದೆ.

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಆಂಬೂರು ಅಯ್ಯಪ್ಪನವರ ಹುಟ್ಟೂರು. ಆಂಬೂರು ಮತ್ತು ಹೊಸೂರುಗಳಲ್ಲಿ ಶಿಕ್ಷಣದ ಬಳಿಕ ಅಶೋಕ ಲೇಲ್ಯಾಂಡ್ ಕಂಪನಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ಶಿಪ್ ಮುಗಿಸಿದ ಅವರು ಡೆಲಿವರಿ ಬಾಯ್ ಆಗಿ ಫಸ್ಟ್ ಫ್ಲೈಟ್ ಕೊರಿಯರ್ ಕಂಪನಿಯನ್ನು ಸೇರಿ,ಬೆಂಗಳೂರಿನಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದರು. ಅಲ್ಲಿ ತನ್ನ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ದಕ್ಷಿಣ ಬೆಂಗಳೂರಿಗೆ ಬರುವ ಎಲ್ಲ ಮೇಲ್‌ಗಳ ವಿಲೇವಾರಿಯನ್ನು ನಿರ್ವಹಿಸುವ ಜವಾಬ್ದಾರಿಯುತ ಹುದ್ದೆಗೆ ಏರಿದ್ದರು.

ಒಂದು ಕಾಲಘಟ್ಟದಲ್ಲಿ ತನ್ನ ಅರ್ಹತೆಯನು ಹೆಚ್ಚಿಸಿಕೊಳ್ಳಲು ಮೂರು ತಿಂಗಳ ಕೋರ್ಸ್‌ವೊಂದನ್ನು ಮಾಡಲು ಬಯಸಿದ್ದ ಅಯ್ಯಪ್ಪ ಕಂಪನಿಯಿಂದ ರಜೆ ಪಡೆದು ಅಲ್ಲಿಗೆ ಸೇರಿದ್ದರು. ಅಲ್ಲಿಂದ ವಾಪಸಾದಾಗ ಫಸ್ಟ್ ಫ್ಲೈಟ್‌ನಲ್ಲಿ ಅವರಿಗಾಗಿ ಯಾವುದೇ ಹುದ್ದೆ ಖಾಲಿ ಇರಲಿಲ್ಲ

ಫಸ್ಟ್ ಫ್ಲೈಟ್ ಆಗ ಅಷ್ಟಾಗಿ ಯಾರಿಗೂ ಗೊತ್ತಿರದಿದ್ದ ಆನ್‌ಲೈನ್ ಪುಸ್ತಕ ಮಾರಾಟ ಮಳಿಗೆ ಫ್ಲಿಪ್‌ಕಾರ್ಟ್‌ನ ನಾಲ್ಕು ಕೊರಿಯರ್ ಪಾರ್ಟ್‌ನರ್‌ಗಳಲ್ಲಿ ಒಂದಾಗಿತ್ತು. ಫ್ಲಿಪ್‌ಕಾರ್ಟ್‌ನ ಖಾತೆಯನ್ನು ನಿರ್ವಹಿಸುತ್ತಿದ್ದ ಡೆಲಿವರಿ ಬಾಯ್ ಫ್ಲಿಪ್‌ಕಾರ್ಟ್‌ನಲ್ಲಿ ಸಹಾಯಕನ ಹುದ್ದೆಯೊಂದು ಖಾಲಿಯಿದೆ ಎಂದು ಅಯ್ಯಪ್ಪನವರಿಗೆ ಮಾಹಿತಿ ನೀಡಿದ್ದ.

ಕೆಲಸವಿಲ್ಲದೆ ಲಾಟರಿ ಹೊಡೆಯುತ್ತಿದ್ದ ಅಯ್ಯಪ್ಪ ಕ್ಷಣವೂ ವಿಳಂಬಿಸದೆ ಫ್ಲಿಪ್‌ಕಾರ್ಟ್‌ನ ಸ್ಥಾಪಕರಾದ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಅವರನ್ನು ಭೇಟಿಯಾಗಿದ್ದರು ಮತ್ತು ಕಂಪನಿಯ ಪ್ರಪಥಮ ಉದ್ಯೋಗಿಯಾಗಿ ನೇಮಕಗೊಂಡಿದ್ದರು. ಅಲ್ಲಿಂದ ಅಯ್ಯಪ್ಪ ಹಿಂದಿರುಗಿ ನೋಡಿಲ್ಲ. ಅವರು ನೇಮಕಗೊಂಡಾಗ ಪ್ಲಿಪ್‌ಕಾರ್ಟ್‌ನಲ್ಲಿ ಮಾನವ ಸಂಪನ್ಮೂಲ ತಂಡವಿರಲಿಲ್ಲ, ಹೀಗಾಗಿ ಒಂದು ವರ್ಷದ ಬಳಿಕ ಅವರ ನೇಮಕಾತಿ ಪತ್ರ ಕೈಸೇರಿತ್ತು.

ಬಿನ್ನಿ ಅಯ್ಯಪ್ಪರನ್ನು ‘ಮಾನವ ಇಆರ್‌ಪಿ(ಉದ್ಯಮ ಸಂಪನ್ಮೂಲ ಯೋಜಕ)’ಎಂದು ಬಣ್ಣಿಸಿದ್ದಾರೆ. ಯಾವ ಪುಸ್ತಕಗಳ ಖರೀದಿ ಬಾಕಿಯಿದೆ,ಯಾವ ಗ್ರಾಹಕರು ಯಾವ ಪುಸ್ತಕಕ್ಕಾಗಿ ಕಾಯುತ್ತಿದ್ದಾರೆ ಎನ್ನುವುದು ಅಯ್ಯಪ್ಪಗೆ ನಿಖರವಾಗಿ ಗೊತ್ತಿರುತ್ತಿತ್ತು. ಗ್ರಾಹಕರು ಕರೆ ಮಾಡಿದಾಗ ಅವರ ಆರ್ಡರ್‌ನ ಸ್ಥಿತಿ ಏನಿದೆ ಎನ್ನುವುದು ಅವರಿಗೆ ಸ್ಪಷ್ಟವಾಗಿ ತಿಳಿದಿರುತ್ತಿತ್ತು. ಅದಕ್ಕಾಗಿ ಕಂಪ್ಯೂಟರ್ ನೋಡುವ ಅಗತ್ಯ ಅವರಿಗಿರಲಿಲ್ಲ.

2008ರಲ್ಲಿ ಅಯ್ಯಪ್ಪ ಫ್ಲಿಪ್‌ಕಾರ್ಟ್ ಸೇರಿದಾಗ ಆರಂಭಿಕ ವೇತನ 8,000 ರೂ.ಗೂ ಕಡಿಮೆಯಿತ್ತು. ಆದರೆ ಅವರಿಗೆ ಆಗಿನ್ನೂ ಹೊಸದಾಗಿದ್ದ, ತಾನು ಭವಿಷ್ಯದಲ್ಲಿ ಈ ಮಟ್ಟಕ್ಕೆ ಬೆಳೆಯಬಹುದೆಂಬ ಕಲ್ಪನೆಯೇ ಇಲ್ಲದಿದ್ದ ಫ್ಲಿಪ್‌ಕಾರ್ಟ್‌ನ ಶೇರುಗಳೂ ದೊರಕಿದ್ದವು. ಕಂಪನಿ ಬೆಳೆದಂತೆ ಈ ಶೇರುಗಳ ಬೆಲೆಯೂ ಅಗಾಧ ಪ್ರಮಾಣದಲ್ಲಿ ಏರಿದೆ. ತನ್ನ ಮದುವೆ ಖರ್ಚಿಗಾಗಿ 2009-10ರಲ್ಲಿ ಮೊದಲ ಬಾರಿಗೆ ತನ್ನಲ್ಲಿದ್ದ ಕೆಲವು ಶೇರುಗಳನ್ನು ಮಾರಾಟ ಮಾಡಿದ್ದ ಅವರು ಎರಡನೇ ಬಾರಿಗೆ ಮಾರಾಟ ಮಾಡಿದ್ದು 2013ರಲ್ಲಿ.

ಇಂದು ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕ ಅನುಭವ ವಿಭಾಗದ ಸಹಾಯಕ ನಿರ್ದೇಶಕನ ಹುದ್ದೆಗೇರಿರುವ ಅಯ್ಯಪ್ಪ ಆರು.ಲ.ರೂ ವರೆಗೆ ವೇತನ ಪಡೆಯುತ್ತಿದ್ದಾರೆ. ದಶಕದ ಹಿಂದೆ ಇದ್ದ ಅದೇ ಮನೆಯಲ್ಲಿಯೇ ಪತ್ನಿ,ತಾಯಿ ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದಾರೆ. ಆಗ ನಡೆದುಕೊಂಡೇ ಕೆಲಸಕ್ಕೆ ಹೋಗುತ್ತಿದ್ದ ಅವರು ಈಗ ಸುಝುಕಿ ಆ್ಯಕ್ಸೆಸ್ 125 ಸ್ಕೂಟರ್ ಬಳಸುತ್ತಿದ್ದಾರೆ. ದುಡ್ಡಿನ ತಾಕತ್ತಿದ್ದರೂ ಕಾರು ಖರೀದಿಸುವ ಗೋಜಿಗೆ ಹೋಗಿಲ್ಲ.

ಕೃಪೆ : timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News