×
Ad

​ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿರುವ ಬಾಂಬ್ ನಾಗ?

Update: 2017-04-16 17:30 IST

ಬೆಂಗಳೂರು, ಎ.16: ಪೊಲೀಸರ ದಾಳಿ ಸಂದರ್ಭದಲ್ಲಿ ಪರಾರಿಯಾಗಿದ್ದ ಪಾಲಿಕೆ ಮಾಜಿ ಸದಸ್ಯ, ರೌಡಿ ಶೀಟರ್ ವಿ.ನಾಗರಾಜ್ ಯಾನೆ ಬಾಂಬ್ ನಾಗ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಆತನ ಬಂಧನಕ್ಕೆ ಶೋಧ ಕಾರ್ಯ ಕೈಗೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಗರದ ಪೊಲೀಸರು ತಮಿಳುನಾಡಿನಲ್ಲಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಈತನ ಪತ್ತೆಗೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು, ಈ ತಂಡಗಳು ಚೆನ್ನೈ, ಧರ್ಮಪುರಿ, ಕಟ್ಪಾಡಿ ಸೇರಿದಂತೆ ತಮಿಳುನಾಡಿನ ಹಲವೆಡೆ ಶೋಧ ನಡೆಸಿವೆ.

ಸದ್ಯ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಬಾಂಬ್ ನಾಗ ನ್ಯಾಯಾಲಯದ ಮೂಲಕ ಶರಣಾಗಲು ಬಯಸಿದ್ದು, ಇನ್ನೊಂದೆರೆಡು ದಿನಗಳಲ್ಲಿ ಈತ ಶರಣಾಗುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆಯಲ್ಲಿ ತನಗೆ ಪರಿಚಯವಿರುವ ಪೊಲೀಸ್ ಅಧಿಕಾರಿಗಳ ಮೂಲಕ ನ್ಯಾಯಾಲಯದಲ್ಲಿ ಶರಣಾಗುತ್ತೇನೆ. ಕಾಲಾವಕಾಶ ಕೊಡಿ ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ ಎನ್ನಲಾಗಿದೆ. ಈತ ಶರಣಾಗತಿ ಪ್ರಸ್ತಾಪಕ್ಕೂ ಸೊಪ್ಪುಹಾಕದ ನಗರ ಪೊಲೀಸರು ಪತ್ತೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

ಹಳೇ ನೋಟುಗಳ ವಿನಿಮಯ, ವಂಚನೆ, ಉದ್ಯಮಿಗಳ ಅಪಹರಣ, ಹಣ ಸುಲಿಗೆ ಮತ್ತಿತ್ತರ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಾಂಬ್ ನಾಗನ ವಿರುದ್ಧ ಸಂಘಟಿತ ಅಪರಾಧ ಕಾಯ್ದೆ ಕೋಕಾವನ್ನು ಬಳಸಲು ನಗರ ಪೊಲೀಸರು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News