ಪಕ್ಷಕ್ಕೆ ಮುಜುಗರ ಸೃಷ್ಟಿಸುವವರ ವಿರುದ್ಧ ಶಿಸ್ತು ಕ್ರಮ ಅನಿವಾರ್ಯ: ದಿನೇಶ್ ಗುಂಡೂರಾವ್

Update: 2017-04-16 12:36 GMT

ಬೆಂಗಳೂರು, ಎ.16: ಪಕ್ಷದಲ್ಲಿದ್ದುಕೊಂಡು ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ತೀವ್ರ ಮುಜುಗರ ಸೃಷ್ಟಿಸುತ್ತಿರುವ ಹಿರಿಯ ಮುಖಂಡರ ವಿರುದ್ಧ ಶಿಸ್ತು ಕ್ರಮ ಅನಿವಾರ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಎಚ್ಚರಿಸಿದ್ದಾರೆ.

ಗಾಂಧಿನಗರ ಕ್ಷೇತ್ರದ ವಿವಿಧ ಪಕ್ಷಗಳ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ಹಿರಿಯ ಮುಖಂಡರ ವರ್ತನೆ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದು, ಅವರು ಸೂಕ್ಷ್ಮವಾಗಿ ಕೆಲ ನಿರ್ದೇಶನಗಳನ್ನು ನೀಡಿದ್ದಾರೆ. ತಮ್ಮ ನಡವಳಿಕೆಯನ್ನು ಅವರು ತಿದ್ದಿಕೊಳ್ಳದಿದ್ದಲ್ಲಿ ಶಿಸ್ತುಕ್ರಮ ಅನಿವಾರ್ಯ ಎಂದು ಹೈಕಮಾಂಡ್ ಸೂಚಿಸಿದೆ ಎಂದರು

ಮಂಗಳೂರಿನ ಹಿರಿಯ ನಾಯಕರೊಬ್ಬರು ದಿನಕ್ಕೊಂದು ಸುದ್ದಿಗೋಷ್ಠಿ ನಡೆಸಿ, ಉಪ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ಪಕ್ಷಕ್ಕೆ ಮುಜುಗರ ತಂದಿದ್ದಾರೆಂದು ದಿನೇಶ್ ಗುಂಡೂರಾವ್, ಜನಾರ್ದನ ಪೂಜಾರಿ ಹೆಸರು ಉಲ್ಲೇಖಿಸದೆ ದೂರಿದರು.

ಬಿಜೆಪಿಗೆ ಹಿಂಜರಿಕೆ: ಬಿಜೆಪಿಯ ಐದು ವರ್ಷಗಳ ಆಡಳಿತ ಮತ್ತು ನಾಲ್ಕು ವರ್ಷಗಳ ಕಾಂಗ್ರೆಸ್ ಆಡಳಿತದ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ. ಇದಕ್ಕೆ ಬಿಜೆಪಿ ಮುಖಂಡರು ಸಿದ್ಧರಿದ್ದಾರೆಯೇ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಅಭಿವೃದ್ಧಿಯ ಕುರಿತು ಬಹಿರಂಗ ಚರ್ಚೆಗೆ ಬಿಜೆಪಿ ಮುಖಂಡರು ಎಂದಿಗೂ ಒಪ್ಪುವುದಿಲ್ಲ. ಏಕೆಂದರೆ ಬಿಜೆಪಿ ಹಗರಣಗಳು ಮತ್ತು ಕೋಮುವಾದ ಮುಂದಿಟ್ಟು ಕೊಂಡು ಆಡಳಿತ ನಡೆಸಿದ್ದನ್ನು ಜನತೆ ಇನ್ನೂ ಮರೆತಿಲ್ಲ ಎಂದ ಅವರು, ರಾಜ್ಯ ಸರಕಾರ ನಾಲ್ಕು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮುಖಂಡರಾದ ಎಸ್.ರೇಖಾ ರಾವ್, ಎಸ್ಸಿ ವಿಭಾಗ ಅಧ್ಯಕ್ಷ ಎ.ಪಿ.ಎಸ್.ರಾಜ್ ಕಾರ್ತಿಕ್, ಸ್ಲಂ ಮೋರ್ಚಾ ಅಧ್ಯಕ್ಷ ಎ.ಎಂ.ರಾಜು, ಮುಸ್ಲಿಮ್ ಮುಖಂಡ ಸೈಯದ್ ತಬ್ರೇಝ್ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News