×
Ad

ಬೆಂಗಳೂರಿನ ಐತಿಹಾಸಿಕ ‘ಬ್ಯೂಲಿಯು ಎಸ್ಟೇಟ್’ನ ಮೇಲೆ ಕರ್ನಾಟಕಕ್ಕೆ ಹಕ್ಕಿಲ್ಲ : ಸುಪ್ರೀಂಕೋರ್ಟ್ ತೀರ್ಪು

Update: 2017-04-16 19:53 IST

ಬೆಂಗಳೂರು, ಎ.16: ಬೆಂಗಳೂರಿನಲ್ಲಿರುವ ಐತಿಹಾಸಿಕ ‘ಬ್ಯೂಲಿಯು ಎಸ್ಟೇಟ್’ನ ಮೇಲೆ ಕರ್ನಾಟಕ ರಾಜ್ಯಕ್ಕೆ ಯಾವುದೇ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಈ ಪಾರಂಪರಿಕ ಎಸ್ಟೇಟ್ 24 ಎಕ್ರೆ ವಿಸ್ತಾರವಾಗಿದ್ದು ಈಗ ಇದರಲ್ಲಿ ಹೋಟೆಲ್ ಸೇರಿದಂತೆ ಹಲವಾರು ವಾಣಿಜ್ಯ ಕಟ್ಟಡಗಳು ಮತ್ತು ನಿವಾಸಗಳಿವೆ. 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ 67ನೇ ಪರಿಚ್ಚೇದದಡಿ ಈ ಎಸ್ಟೇಟ್‌ನಲ್ಲಿರುವ ನಿವಾಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕರ್ನಾಟಕ ಸರಕಾರದ ಆದೇಶವನ್ನು ತಳ್ಳಿಹಾಕಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ.

ಯಾವುದೇ ಒಂದು ಆಸ್ತಿ ಇನ್ನೊಬ್ಬರಿಗೆ ಸೇರಿಲ್ಲವಾದರೆ ಅದು ಸರಕಾರಕ್ಕೆ ಸೇರುತ್ತದೆ ಎಂದು 1964ರ ಕರ್ನಾಟಕ ಭೂಕಂದಾಯ ಕಾಯ್ದೆಯ 67ನೇ ಪರಿಚ್ಚೇದದಲ್ಲಿ ಹೇಳಲಾಗಿದೆ.
      
ಪ್ರಥಮ ರಾಣಿಯ ಪರವಾಗಿ ಮೈಸೂರಿನ ದಿವಾನರು 117 ವರ್ಷಗಳ ಹಿಂದೆ ಈ ಆಸ್ತಿಯನ್ನು ಖರೀದಿಸಿದ್ದರು ಮತ್ತು ಇದರ ಮೊತ್ತವನ್ನು ರಾಣಿ ವೈಯಕ್ತಿಕವಾಗಿ ಪಾವತಿಸಿದ್ದರೆಂದು ಲಭ್ಯ ದಾಖಲೆಗಳಿಂದ ತಿಳಿದು ಬರುತ್ತದೆ. ಮೂಲ ವ್ಯಹಾರ ದಸ್ತಾವೇಜು ಕಾರ್ಯಗತಗೊಂಡ ಸುಮಾರು 100ಕ್ಕೂ ಹೆಚ್ಚು ವರ್ಷದ ಬಳಿಕ ಮೂಲ ವ್ಯವಹಾರ ಒಪ್ಪಂದ ಅಕ್ರಮವಾಗಿದೆ ಮತ್ತು ಆ ಬಳಿಕದ ವರ್ಗಾವಣೆ ಗುಪ್ತ ಮೋಸದ ಕ್ರಮ ಎಂದು ಸರಕಾರ ಆಗ್ರಹಿಸಲು ಅನುಮತಿ ನೀಡಲಾಗದು ಎಂದು ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕುರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠವೊಂದು ತಿಳಿಸಿದೆ.

1990ರ ಆಗಸ್ಟ್ 25ರಂದು ಈ ಆಸ್ತಿಯ ವ್ಯವಹಾರ ದಸ್ತಾವೇಜು ಅಂತಿಮಗೊಳ್ಳುವ ಮೊದಲು ಮೈಸೂರಿನ ದಿವಾನರು ಮೈಸೂರಿನ ಮಹಾರಾಜರಿಗೆ ಟಿಪ್ಪಣಿ ಮೂಲಕ ಹೀಗೆ ತಿಳಿಸಿದ್ದರು- ಈ ಎಸ್ಟೇಟನ್ನು ಪ್ರಥಮ ರಾಣಿಯವರಿಗಾಗಿ ಖರೀದಿಸುವ ಕಾರಣ ಇದರ ಮೊತ್ತವನ್ನು ರಾಣಿಯ ವೈಯಕ್ತಿಕ ನಿಧಿಯಿಂದ ಪಾವತಿಸಬೇಕು .ಅಲ್ಲದೆ ಈ ವಿಷಯವನ್ನು ರಾಣಿಯ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಮುಂದುವರಿಯಬೇಕು ಎಂದು ಕೋರಿದ್ದರು. 1900ರಲ್ಲಿ ಮಹಾರಾಜರು ಮತ್ತು ದಿವಾನರು ಸೇರಿಕೊಂಡು ಮೈಸೂರು ರಾಜ್ಯಕ್ಕೆ ಮೋಸ ಮಾಡಿ, ಮಹಾರಾಣಿಗೆ ಅನುಕೂಲವಾಗುವ ರೀತಿ ದಾಖಲೆ ಸೃಷ್ಟಿಸಿದ್ದರು ಎಂಬುದನ್ನು ನಂಬಲಾಗದು. ಅಲ್ಲದೆ ಮೋಸ ಮಾಡಲಾಗಿದೆ ಎಂಬುದನ್ನು ರುಜುವಾತು ಪಡಿಸಬೇಕು. ಕೇವಲ ಊಹಿಸುವುದು ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಕಾಯ್ದೆಯ 67ನೇ ಪರಿಚ್ಚೇದವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರ 2004ರಲ್ಲಿ , ಎಸ್ಟೇಟ್‌ನ 20 ಎಕ್ರೆ 9 ಗುಂಟೆ ಸ್ಥಳವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿ ಈ ಸ್ಥಳವನ್ನು ಸ್ವಾಧೀನಕ್ಕೆ ಪಡೆದಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಮತ್ತು ಸರಕಾರದ ಕ್ರಮಕ್ಕೆ ಹೈಕೋರ್ಟ್ ಮಾನ್ಯತೆ ನೀಡಿರಲಿಲ್ಲ.


 
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News