ಪ್ರಶಾಂತ್ ಕಿಶೋರ್ ರಣತಂತ್ರ ಬೇಕಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಹೊಸದಿಲ್ಲಿ, ಎ. 15: ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳು ಮುಂದಿನ ಚುನಾವಣೆಯಲ್ಲಿ ನಮಗೆ ಶ್ರೀರಕ್ಷೆಯಾಗಲಿದ್ದು, ತಮ್ಮ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ನೆರವಿನ ಅಗತ್ಯವಿಲ್ಲ ಎಂದಿದ್ದಾರೆ.
ರವಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ಸಂಬಂಧ ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ, 2018ರ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ವಿಶಿಷ್ಟ ಕಾರ್ಯತಂತ್ರವನ್ನು ನಾವೇ ರೂಪಿಸಲಿದ್ದೇವೆ. ಅಲ್ಲದೆ, ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದ್ದೇವೆಂದು ಭರವಸೆ ವ್ಯಕ್ತಪಡಿಸಿದರು.
ಬಿಜೆಪಿ ಮಾದರಿಯಲ್ಲಿ ಚುನಾವಣೆ ನಿರ್ವಹಣೆಯನ್ನು ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ವಹಿಸುವ ಪ್ರಮೇಯವೇ ಇಲ್ಲ ಎಂದ ಸಿದ್ದರಾಮಯ್ಯ, ತನ್ನ ನೇತೃತ್ವದಲ್ಲಿ, ಕೆಪಿಸಿಸಿ ಅಧ್ಯಕ್ಷರು ಮತ್ತು ಎಲ್ಲ ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ಮುಂಬರುವ ಚುನಾವಣೆ ಎದುರಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಿಂಹಗೆ ಇನ್ನೂ ರಾಜಕೀಯ ಜ್ಞಾನವಿಲ್ಲ: ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪಸಿಂಹಗೆ ಇನ್ನೂ ರಾಜಕೀಯ ಜ್ಞಾನ ಬಂದಿಲ್ಲ. ಹೀಗಾಗಿ ಅವರು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಗುಂಡ್ಲುಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್ ವಿರುದ್ಧ ಪ್ರತಾಪಸಿಂಹ ನೀಡಿದ ಅಸಂಬದ್ಧ ಹೇಳಿಕೆ ಮಹಿಳೆಯರಿಗೆ ಇಷ್ಟ ಆಗಿಲ್ಲ. ಹೀಗಾಗಿ ಬಿಜೆಪಿಗೆ ಹಿನ್ನಡೆಯೂ ಆಯಿತು ಎಂದು ಅವರು ವಿಶ್ಲೇಷಿಸಿದರು.
ಚುನಾವಣೆ ಸಂದರ್ಭ ಬಳಕೆಯಾಗುವ ಇವಿಎಂ ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆ. ಇದನ್ನು ನಾನು ತಜ್ಞರ ಜತೆ ಚರ್ಚಿಸಿ ಅರಿತುಕೊಂಡಿದ್ದೇನೆ. ದೇಶದ ಕೆಲವೆಡೆ ಮತಯಂತ್ರ ತಿರುಚಲಾಗಿದೆ ಎನ್ನುವ ಆರೋಪ ಸುಳ್ಳಾಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.