ಅಮಲು ಗುಳಿಗೆ ಮಾಫಿಯಾ...!!

Update: 2017-04-17 18:54 GMT

ಅಮಲು ಪದಾರ್ಥಗಳೆಂದರೆ ನಮಗೆ ತಟ್ಟನೆ ಹೊಳೆಯುವಂತಹ ಹೆಸರುಗಳು ಗಾಂಜಾ, ಅಫೀಮು, ಚರಸ್ ಇತ್ಯಾದಿ. ಇವೆಲ್ಲವುಗಳೂ ನಿಷೇಧಿತ ಅಮಲು ಪದಾರ್ಥಗಳಾದ್ದರಿಂದ ಇವುಗಳು ಎಲ್ಲೆಡೆ ಎಲ್ಲರಿಗೂ ಸಿಗುವುದಿಲ್ಲ. ಇವುಗಳ ವಿತರಣೆ ಮತ್ತು ಮಾರಾಟಕ್ಕೆ ಕ್ರಿಮಿನಲ್‌ಗಳ ದೊಡ್ಡ ಜಾಲವೇ ಇರುತ್ತದೆ. ಅಂತಹ ಜಾಲದ ಸಂಪರ್ಕವಿರುವವರು ಮಾತ್ರ ಇವುಗಳನ್ನು ಸುಲಭವಾಗಿ ಪಡೆಯಲು ಸಾಧ್ಯ. ಅಂದ ಮಾತ್ರಕ್ಕೆ ಇದು ಸಿಲ್ಲಿಯಾಗಿ ತೆಗೆದುಕೊಳ್ಳಬೇಕಾದ ವಿಚಾರವೇನಲ್ಲ. 

ಇಂದು ಅತೀ ವೇಗದಲ್ಲಿ ಹರಡಿ ಸಾಮಾಜಿಕ ಸ್ವಾಸ್ಥ್ಯವನ್ನು ಕೆಡವುತ್ತಿರುವ ದೊಡ್ಡ ಮಾಫಿಯಾ ನಿದ್ರೆ ಗುಳಿಗೆ ಮಾಫಿಯಾ. ಆದರೆ ಇದು ಅಮಲು ಪದಾರ್ಥಗಳ ಪಟ್ಟಿಗೂ ಸೇರಿಸಲ್ಪಟ್ಟಿಲ್ಲ ಮತ್ತು ಸುಲಭವಾಗಿ ಅವುಗಳ ದಾಸರ ಕೈಗೆಟುಕುವಂತಹದ್ದು. ಈ ಅಘೋಷಿತ ಮಾಫಿಯಾವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಳೆಸಿ ಪೋಷಿಸುತ್ತಿರುವವರು ಸಮಾಜದ ಗೌರವಾನ್ವಿತ ವೃತ್ತಿಪರರಾದ ವೈದ್ಯರು ಮತ್ತು ಗೌರವಾನ್ವಿತ ವ್ಯಾಪಾರಸ್ಥರಾದ ಔಷಧಿ ವ್ಯಾಪರಿಗಳು ಎಂದರೆ ಅಚ್ಚರಿ ಪಡಬೇಕಾಗಿಲ್ಲ. ಇತ್ತೀಚಿನವರೆಗೆ ಕೆಮ್ಮು ನಿವಾರಕ ಸಿರಪನ್ನು ಅಮಲು ದಾಸರು ಅಮಲು ಪದಾರ್ಥವೆಂಬಂತೆ ಸೇವಿಸುತ್ತಿದ್ದರು. ಕೋಡಿನ್ ಎಂಬ ದ್ರಾವಣವಿರುವ ಕೆಮ್ಮು ನಿವಾರಕ ಔಷಧಿಯನ್ನು 100 ಮಿಲಿ ಲೀಟರ್ ಕುಡಿಯುವುದೂ ಒಂದು ಕ್ವಾರ್ಟರ್ ಬಾಟಲಿ ಮಧ್ಯ ಸೇವಿಸುವುದೂ ಒಂದೇ.

ವಿದ್ಯಾರ್ಥಿಗಳು ಮತ್ತು ಯುವಜನತೆ ಇದರ ದಾಸರಾಗುವುದು ಮಿತಿ ಮೀರಿದಾಗ ಸರಕಾರ ಕೋಡಿನ್‌ಯುಕ್ತ ಕೆಮ್ಮು ನಿವಾರಕ ಔಷಧಿಯನ್ನು ನಿಷೇಧಿಸಿತು. ಕೋಡಿನ್‌ಯುಕ್ತ ಕೆಮ್ಮು ನಿವಾರಕ ಸಿರಪ್‌ನ ದಾಸರಾಗಿದ್ದವರು ಅದಕ್ಕೆ ನಿಷೇಧ ಬೀಳುತ್ತಲೇ ಅಮಲು ಚಟಕ್ಕಾಗಿ ಸೈಕಿಯಾಟ್ರಿಕ್ ಮಾತ್ರೆಗಳಿಗೆ ತಮ್ಮ ಚಟವನ್ನು ವರ್ಗಾಯಿಸಿದರು. ಅದಕ್ಕಿಂತ ಮುಂಚೆಯೂ ಈ ನಿದ್ರೆ ಗುಳಿಗೆಯ ಚಟಕ್ಕೆ ಬಿದ್ದವರು ದೊಡ್ಡ ಸಂಖ್ಯೆಯಲ್ಲಿದ್ದರು.

ಮಾನಸಿಕ ಕಾಯಿಲೆೆಯಿಂದ ಬಳಲುವವರಿಗೆ ಇರುವ ಬಹು ದೊಡ್ಡ ಸಮಸ್ಯೆ ನಿದ್ರಾಹೀನತೆ. ಆದುದರಿಂದ ಮಾನಸಿಕ ಕಾಯಿಲೆೆಗಳ ಚಿಕಿತ್ಸೆಯಲ್ಲಿ Nitrozepham, Alphrazolam, Diazepam ಮುಂತಾದ ಮಂಪರು ಕವಿಯುವ ಔಷಧಿಗಳನ್ನು ಬಳಸಲಾಗುತ್ತದೆ. ಅಮಲು ದಾಸರು ಇವುಗಳನ್ನು ಅಮಲು ಪದಾರ್ಥದಂತೆ ಸೇವಿಸುತ್ತಾರೆ. ಈ ಮೇಲೆ ಉಲ್ಲೇಖಿಸಿದ ಔಷಧಿಗಳು ಸಾಮಾನ್ಯವಾಗಿ ಎಲ್ಲಾ ಔಷಧಾಲಯಗಳಲ್ಲಿ ಲಭ್ಯವಿರುತ್ತದಾದರೂ ಅವುಗಳ ಮಾರಾಟಕ್ಕೆ ಕೆಲವು ಕಠಿಣ ನಿರ್ಬಂಧಗಳಿವೆ. ಇವುಗಳನ್ನು ಯಾವ ಔಷಧಾಲಯಗಳಲ್ಲೂ ಒಟ್ಟಾರೆ ಮಾರುವಂತಿಲ್ಲ. ಇವುಗಳನ್ನು ವೈದ್ಯರ ನೋಂದಣಿ ಸಂಖ್ಯೆ ಸಹಿತ ಮೊಹರು ಇರುವ ಪ್ರಿಸ್ಕ್ರಿಪ್ಷನ್‌ಗೆ ಮಾತ್ರ ನೀಡಬಹುದು. ಆದರೆ ಇಂದು ಕೆಲವು ಔಷಧಾಲಯಗಳು ಅವುಗಳನ್ನು ಮಾರುವ ಮಾಫಿಯಾದಂತೆ ಕಾರ್ಯನಿರ್ವಹಿಸುತ್ತಿರುವುದು ಅಪಾಯಕಾರಿ ಸಂಗತಿ.

ಹೆಚ್ಚೆಂದರೆ 2 ರೂಪಾಯಿ ಬೆಲೆಯಿರುವ ಈ ಮಾತ್ರೆಯನ್ನು 50 ರೂಪಾಯಿಗೊಂದರಂತೆ ಮಾರುವ ಔಷಧಾಲಯಗಳೂ ಇವೆ. ಇವುಗಳ ಚಟಕ್ಕೆ ಬಿದ್ದವರಿಗೆ ಅದರ ಬೆಲೆ ಎಷ್ಟೆಂದು ಗೊತ್ತಿದ್ದರೂ ಅವರು ದುಡ್ಡಿನ ಮುಖ ನೋಡದೇ ಎಷ್ಟೇ ಬೆಲೆ ತೆತ್ತಾದರೂ ಇಂತಹ ಮಾತ್ರೆಗಳನ್ನು ಖರೀದಿಸುತ್ತಾರೆ. ವೈದ್ಯಕೀಯ ಕಾನೂನಿನ ಪ್ರಕಾರ ವೈದ್ಯರು ಬೇಕು ಬೇಕೆಂದವರಿಗೆಲ್ಲಾ ಇಂತಹ ಔಷಧಿ ಬರೆದುಕೊಡುವಂತಿಲ್ಲ. ಯಾರಿಗಾದರೂ ಇಂತಹ ಔಷಧಿಗಳ ಪ್ರಿಸ್ಕ್ರಿಪ್ಷನ್ ಬರೆದುಕೊಡುವಾಗ ಇಂತಿಷ್ಟು ಪ್ರಮಾಣ ಎಂದು ಕಡ್ಡಾಯವಾಗಿ ನಮೂದಿಸಬೇಕು. ಔಷಧಾಲಯದವರು ವೈದ್ಯರು ನಮೂದಿಸಿದ್ದಕ್ಕಿಂತ ಒಂದು ಮಾತ್ರೆಯನ್ನೂ ಹೆಚ್ಚುವರಿ ಕೊಡುವಂತಿಲ್ಲ.

ಒಮ್ಮೆ ಒಂದು ಪ್ರಿಸ್ಕ್ರಿಪ್ಷನ್‌ಗೆ ಇಂತಹ ಔಷಧಿ ನೀಡಿದ ತಕ್ಷಣ ISSUED ಎಂಬ ಮೊಹರು ಹಾಕಿ ವಾಪಸು ನೀಡಬೇಕು. ಒಮ್ಮೆ ISSUED ಮೊಹರು ಬಿದ್ದ ಪ್ರಿಸ್ಕ್ರಿಪ್ಷನ್‌ಗೆ ಪುನಃ ಯಾವುದೇ ಔಷಧಾಲಯದಲ್ಲೂ ಔಷಧಿ ನೀಡುವಂತಿಲ್ಲ. ಆದರೆ ISSUED ಮೊಹರನ್ನು ಬಹುತೇಕ ಔಷಧಾಲಯಗಳವರು ಹಾಕುವುದಿಲ್ಲ. ಎಲ್ಲಾ ಔಷಧಾಲಯಗಳು ಇಂತಹ ಔಷಧಿ ಖರೀದಿ ಮತ್ತು ಮಾರಾಟದ ದಾಖಲೆಯಿಟ್ಟುಕೊಳ್ಳಬೇಕು. ಔಷಧ ನಿಯಂತ್ರಕರು ಆಗ್ರಹಿಸಿದರೆ ಎಲ್ಲಾ ದಾಖಲೆ ಒದಗಿಸಬೇಕು. ಆದರೆ ಇಂತಹ ನಿಯಮಾವಳಿಗಳೆಲ್ಲಾ ಕೇವಲ ಕಡತಗಳಿಗೆ ಸೀಮಿತವಾಗಿದೆ.

ಇಂದು ಕೆಲವು ವೈದ್ಯರು ಕೇವಲ ಧನದಾಹಕ್ಕಾಗಿ ಇಂತಹ ಔಷಧಿ ಬರೆದು ಕೊಡುತ್ತಿದ್ದಾರೆ. ಅದಕ್ಕೆ ಅವರಿಗೆ ಖರ್ಚಾಗುವುದು ಒಂದು ಪ್ರಿಸ್ಕ್ರಿಪ್ಷನ್ ಕಾಗದ ಮತ್ತು ಕೆಲವು ಹನಿ ಶಾಯಿ ಮಾತ್ರ. ಆದರೆ ಅದು ಸಮಾಜದ ಮೇಲೆ ಬೀರುವ ಪ್ರತಿಕೂಲ ಪರಿಣಾಮ ಅಗಾಧವಾದುದು. ಇದನ್ನೇ ದಂಧೆಯಾಗಿರಿಸಿರುವ ವೈದ್ಯರೂ ಇದ್ದಾರೆ. ಈ ಅಮಲು ಗುಳಿಗೆ ಮಾಫಿಯಾ ಪ್ರಿಸ್ಕ್ರಿಪ್ಷನ್ ಮಾರಾಟದ ದಂಧೆಯನ್ನೂ ಮಾಡುತ್ತಿದೆ. ವೈದ್ಯರ ಹೆಸರಲ್ಲಿ ಪ್ರಿಸ್ಕ್ರಿಪ್ಷನ್ ಪ್ಯಾಡ್ ಮುದ್ರಿಸಿ, ನಕಲಿ ನೋಂದಣಿ ಸಂಖ್ಯೆ ಸಹಿತ ಮೊಹರನ್ನೂ ತಯಾರಿಸಿ ಪ್ರಿಸ್ಕ್ರಿಪ್ಷನ್‌ಗೆ ಇಷ್ಟೆಂದು ದರ ನಿಗದಿಪಡಿಸಿ ಮಾರುವ ಕ್ರಿಮಿನಲ್‌ಗಳೂ ಇದ್ದಾರೆ. ಆದರೆ ಇದರ ಜಾಲವನ್ನು ಭೇದಿಸುವುದು ಅಷ್ಟು ಸುಲಭವಲ್ಲ.

ಆದಾಗ್ಯೂ ಅಮಲು ಗುಳಿಗೆ ಮಾಫಿಯಾಕ್ಕೆ ಕಡಿವಾಣ ಹಾಕುವುದು ಅಂತಹ ಕಷ್ಟದ ಕೆಲಸವೇನಲ್ಲ. ಇಂತಹ ಗುಳಿಗೆಗಳು ನಿಜವಾಗಿ ಬಳಕೆಯಾಗುವುದು ಮತ್ತು ಬಳಕೆಯಾಗಬೇಕಾದುದು ಮಾನಸಿಕ ಕಾಯಿಲೆೆಗಳ ಚಿಕಿತ್ಸೆಗೆ ಮಾತ್ರ. ಆದುದರಿಂದ ಇಂತಹ ಗುಳಿಗೆಗಳನ್ನು ಕೇವಲ ಮಾನಸಿಕ ತಜ್ಞರಿಗೆ ಮಾತ್ರ ವಿತರಣೆಯಾಗುವಂತಹ ಬಲವಾದ ನಿಯಮಾವಳಿ ಜಾರಿಗೆ ತರಬೇಕು. ಇತರ್ಯಾವುದೇ ವೈದ್ಯರಿಗಾಗಲೀ, ಔಷಧಾಲಯಗಳಿಗಾಗಲೀ ಇಂತಹ ಗುಳಿಗೆಗಳನ್ನು ವಿತರಿಸಲೇಬಾರದೆಂಬ ಕಠಿಣ ಕಾಯ್ದೆ ಜಾರಿಗೆ ತರಬೇಕು. ಫಿಸಿಶಿಯನ್‌ಗಳು Anxietyಯಂತಹ ಕಾಯಿಲೆೆಗಳಿಗೆ ಚಿಕಿತ್ಸೆ ನೀಡುತ್ತಾರಾದರೂ ಅದಕ್ಕೆ ಬೇಕಾಗುವ ಧಾರಾಳ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇಂತಹ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವ ಇಚ್ಛಾಶಕ್ತಿಯನ್ನು ನಮ್ಮ ಪ್ರಭುತ್ವ ತೋರಿದರೆ ಅಮಲು ಗುಳಿಗೆ ಮಾಫಿಯಾದ ಹುಟ್ಟಡಗಿಸಬಹುದು 

Writer - ಇಸ್ಮತ್ ಫಜೀರ್

contributor

Editor - ಇಸ್ಮತ್ ಫಜೀರ್

contributor

Similar News