ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ: ದಿಗ್ವಿಜಯ್

Update: 2017-04-18 07:42 GMT

ಬೆಂಗಳೂರು, ಎ.18: ಪ್ರಸ್ತುತ ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ. ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್ ಅವರಿದ್ದಾರೆ. ಆ ಹುದ್ದೆಗೆ ಯಾವುದೇ ಸ್ಪರ್ಧೆ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‍ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ, ಯಾವುದೇ ಸ್ಪರ್ಧೆಯೂ ಇಲ್ಲ. ಸಚಿವ ಸಂಪುಟ ವಿಸ್ತರಣೆ, ಮೇಲ್ಮನೆಗೆ ನಾಮನಿರ್ದೇಶಿತ ಸದಸ್ಯರ ನೇಮಕ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದು ಅವರು ತಿಳಿಸಿದ್ದಾರೆ.

ಅಧ್ಯಕ್ಷಗಾದಿ ಹುದ್ದೆ ವಿಷಯದ ಬಗ್ಗೆ ಯಾರೂ ಪರ ಮತ್ತು ವಿರೋಧವಾಗಿ ಚರ್ಚೆ ನಡೆಸಬಾರದು. ಈ ಸಂಬಂಧ ಯಾವುದೇ ತೀರ್ಮಾನವಿದ್ದರೂ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಆಕಾಂಕ್ಷಿಗಳಿಗೆ ಸೂಚನೆ ಕೂಡ ನೀಡಿದ್ದಾರೆ. 

ಉಪಚುನಾವಣೆ ಫಲಿತಾಂಶದ ನಂತರ ಕೆಪಿಸಿಸಿ ಅಧ್ಯಕ್ಷ ಗಾದಿ ಪಡೆಯಲು ಭಾರೀ ಪೈಪೋಟಿ ನಡೆದಿತ್ತು. ಆಕಾಂಕ್ಷಿಗಳು ದಿಲ್ಲಿ ಯಾತ್ರೆ ಕೂಡ ನಡೆಸಿದ್ದರು. ಈ ಬೆನ್ನಲ್ಲೇ ನಿನ್ನೆ ಹಿರಿಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆದಿದ್ದು, ಇಂದು ದಿಗ್ವಿಜಯ್‍ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಹುದ್ದೆ ಖಾಲಿ ಇಲ್ಲ ಎಂದು ಹೇಳುವ ಮೂಲಕ ಪರಮೇಶ್ವರ್ ಅವರ ಕುರ್ಚಿ ಭದ್ರವಾದಂತಾಗಿದೆ. 

ನಂಜನಗೂಡು-ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲ್ಲಲು ಕಾರಣವಾದ ಮತದಾರರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದ ಅವರು, ರಾಜ್ಯದಲ್ಲಿ ಲಿಂಗಾಯತ ಸಮುದಾಯ ಕಾಂಗ್ರೆಸ್ ಜತೆಗಿದೆ ಎಂದು ಈ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ. ಲಿಂಗಾಯತ ಸಮುದಾಯ ಯಡಿಯೂರಪ್ಪರ ಜತೆಗಿದೆ ಎಂದು ಬಿಂಬಿಸಲಾಗುತ್ತಿತ್ತು. ಆದರೆ, ಆ ಸಮುದಾಯ ಕಾಂಗ್ರೆಸ್ ಜತೆಗಿದೆ ಎಂದು ದಿಗ್ವಿಜಯ್‍ಸಿಂಗ್ ತಿಳಿಸಿದರು.

ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದೆ. ಸದೃಢವಾಗಿ ಪಕ್ಷ ಕಟ್ಟಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಮೂಲಕ ಮತ್ತೊಂದು ಬಾರಿ ಅಧಿಕಾರ ಹಿಡಿಯುವತ್ತ ಗಮನ ಹರಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.

ಸಂಪುಟ ವಿಸ್ತರಣೆ, ಮೇಲ್ಮನೆಗೆ ನಾಮನಿರ್ದೇಶಿತ ಸದಸ್ಯರ ನೇಮಕ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್ ಅವರು ದಿಲ್ಲಿಗೆ ತೆರಳಿದ್ದ ಬೆನ್ನಲ್ಲೇ ಆಕಾಂಕ್ಷಿಗಳು ಕೂಡ ದೌಡಾಯಿಸಿದ್ದರು. 

ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ ಅವರು ಕೆಪಿಸಿಸಿ ಅಧ್ಯಕ್ಷರಾಗುವ ಆಸೆ ವ್ಯಕ್ತಪಡಿಸಿದ್ದರು. ಈ ಸಂಬಂಧ ಲಾಬಿಯೂ ಕೂಡ ನಡೆದಿತ್ತು. ದಿಗ್ವಿಜಯ್‍ಸಿಂಗ್ ಅವರ ಸ್ಪಷ್ಟನೆಯಿಂದ ಈ ಎಲ್ಲ ಲಾಬಿಗೆ ಅಲ್ಪ ವಿರಾಮ ಬಿದ್ದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News