ದೇವಸ್ಥಾನದಲ್ಲಿ ದೇವರಿಲ್ಲ, ಪೂಜಾರಿಗಳು ಮೈಗಳ್ಳರು: ಡಾ.ಕೆ.ಎಸ್.ಭಗವಾನ್

Update: 2017-04-21 15:29 GMT

ಬೆಂಗಳೂರು, ಎ.21:ದೇವಸ್ಥಾನದಲ್ಲಿ ದೇವರಿದ್ದಾನೆ ಎಂದು ಸುಳ್ಳುಹೇಳಿ ಶ್ರಮ ಜೀವಿಗಳಿಂದ ಹಣ ಸೇರಿ ಇನ್ನಿತರೆ ವಸ್ತುಗಳನ್ನು ಉಚಿತವಾಗಿ ಪಡೆದ ಪೂಜಾರಿಗಳು ದಂಡಪಿಂಡಗಳಾಗಿದ್ದಾರೆ ಎಂದು ವಿಚಾರವಾದಿ ಡಾ.ಕೆ.ಎಸ್.ಭಗವಾನ್ ಹೇಳಿದ್ದಾರೆ.

 ಶುಕ್ರವಾರ ನಗರದ ಎನ್‌ಜಿಒ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ(ಸಮತಾವಾದ) ಹಮ್ಮಿಕೊಂಡಿದ್ದ, ಬೂಸಾ ಸಾಹಿತ್ಯ ಚಳವಳಿಯ ಹರಿಕಾರ ಬಿ.ಬಸವಲಿಂಗಪ್ಪ ಅವರ 93ನೆ ಜನ್ಮದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಾವಿರಾರು ದೇವಸ್ಥಾನಗಳಿವೆ. ಅದರಲ್ಲಿ, ದೇವರಿಲ್ಲ ಎಂದು ಪೂಜಾರಿಗಳಿಗೆ ಸ್ಪಷ್ಟವಾಗಿ ಗೊತ್ತು. ಆದರೂ, ದೇವರಿದ್ದಾನೆ ಎಂದು ಜನರನ್ನು ನಂಬಿಸಿ, ಅವರು ನೀಡುವ ಹಣ, ಚಿನ್ನ ಇನ್ನಿತರೆ ವಸ್ತುಗಳ ರೂಪದಲ್ಲಿ ದಕ್ಷಿಣೆ ಪಡೆದು, ಪೂಜಾರಿಗಳೆಲ್ಲಾ ಮೈಗಳ್ಳರಾಗಿದ್ದಾರೆ ಎಂದು ಭಗವಾನ್ ಆಪಾದಿಸಿದರು.

26 ಬಾರಿ ದಾಳಿ: ಭಾರತದ ಮೇಲೆ ಬ್ರಿಟಿಷರು ಸೇರಿದಂತೆ ಒಟ್ಟು 26 ಬಾರಿ ಅನೇಕರು ದಾಳಿ ನಡೆಸಿದ್ದಾರೆ. ಅಷ್ಟೆ ಅಲ್ಲದೆ, ನಮ್ಮನ್ನು ಗುಲಾಮರಂತೆ ಮಾಡಿಕೊಂಡಿದ್ದರು. ಆಗ ದೇವರು ಎಂದು ಹೇಳಿಕೊಳ್ಳುವ ರಾಮ, ಕೃಷ್ಣ, ವಿಷ್ಣು ಒಳಗೊಂಡಂತೆ 33 ಕೋಟಿ ಹಿಂದೂ ದೇವರುಗಳು ಪ್ರಜೆಗಳನ್ನು ರಕ್ಷಣೆ ಮಾಡದೆ ಎಲ್ಲಿ ಹೋಗಿದ್ದರು ಎಂದು ಅವರು ವ್ಯಂಗ್ಯವಾಡಿದರು.

ಇತಿಹಾಸದಲ್ಲಿ 65% ಸುಳ್ಳು: ಶಾಲಾ-ಕಾಲೇಜು ಮಕ್ಕಳ ಇತಿಹಾಸ ವಿಷಯದ ಪಠ್ಯ ಪುಸ್ತಕಗಳಲ್ಲಿ ಶೇಕಡ 65ರಷ್ಟು ಭಾಗ ಸುಳ್ಳು ಇದೆ. ಧರ್ಮ, ಜಾತಿಗಳ ನಡುವೆ ದೂರ ಹೆಚ್ಚಿಸುವ ಪಠ್ಯಗಳು ಇಂದಿಗೂ ನಮ್ಮ ಮುಂದಿವೆ ಎಂದ ಅವರು, ಪ್ರತಿಯೊಬ್ಬರು ಸ್ಪಷ್ಟವಾಗಿ ಇತಿಹಾಸ ತಿಳಿದುಕೊಳ್ಳಲು ಮುಂದಾಗಬೇಕು. ಅದೇರೀತಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆಯೂ ಯುವಕರು ತಿಳಿದುಕೊಳ್ಳಬೇಕೆಂದು ಕರೆ ನೀಡಿದರು.

ಬ್ರಾಹ್ಮಣಶಾಹಿ ಮುಕ್ತವಾಗಲಿ: ನಾವು ಬ್ರಿಟಿಷರಿಂದ ಸ್ವಾತಂತ್ರ ಪಡೆದು ಮುಕ್ತವಾಗಿ ಬದುಕುತ್ತಿದ್ದೇವೆ. ಆದರೆ, ಬ್ರಾಹ್ಮಣಶಾಹಿ ಪದ್ಧತಿಯಿಂದ ಮುಕ್ತವಾಗಬೇಕಾಗಿದೆ. ಮೇಲು-ಕೀಳು ಎನ್ನುವ ಭಾವನೆಯನ್ನು ದೂರಗೊಳಿಸಬೇಕು. ಎಲ್ಲರೂ ಒಗ್ಗೂಡಿ ಜೀವಿಸುವ ಸಮಸಮಾಜ ನಿರ್ಮಿಸಬೇಕೆಂದು ಭಗವಾನ್ ಹೇಳಿದರು.

ಕಾರ್ಯಕ್ರಮದಲ್ಲಿ ದಸಂಸ(ಸಮತಾವಾದ) ರಾಜ್ಯಾಧ್ಯಕ್ಷ ಎಚ್.ಮಾರಪ್ಪ, ಗೌರವಾಧ್ಯಕ್ಷ ಕೆ.ತಮ್ಮಯ್ಯ, ದಸಂಸ ಮುಖಂಡರಾದ ಚಂದ್ರಪ್ಪ, ಬಸವರಾಜು, ರಮೇಶ್, ಹೈಕೋರ್ಟ್ ವಕೀಲ ಎಚ್.ಆರ್.ವಿಶ್ವನಾಥ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News