ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ: ಕೆ.ಜೆ.ಜಾರ್ಜ್

Update: 2017-04-21 15:47 GMT

ಬೆಂಗಳೂರು, ಎ.21: ಬಜೆಟ್‌ನಲ್ಲಿ ಮೀಸಲಿಟ್ಟಿರುವ 7300 ಕೋಟಿ ರೂ. ಅನುದಾನವನ್ನು ಬಳಸಿಕೊಂಡು ಮುಂದಿನ ಎಂಟು ತಿಂಗಳಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಶುಕ್ರವಾರ ಮಹದೇವಪುರ ಕ್ಷೇತ್ರದ ದೊಡ್ಡನೆಕ್ಕುಂದಿಯಲ್ಲಿ ನೂತನವಾಗಿ ನಿರ್ಮಿಸಿರುವ ಮೇಲ್ಸೇತುವೆಯ ಲೋಕಾರ್ಪಣೆ ಹಾಗೂ ಹೂಡಿ ಮತ್ತು ವರ್ತೂರು ಕೋಡಿಯಲ್ಲಿ ನಗರೋತ್ಥಾನ ಯೋಜನೆಯಡಿ 210 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

 ಮುಂದಿನ ಎಂಟು ತಿಂಗಳಲ್ಲಿ 7300 ಕೋಟಿ ರೂ.ಅನುದಾನವನ್ನು ಬಳಸಿಕೊಂಡು ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಈ ಮೇಲ್ಸೇತುವೆಯನ್ನು 44 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. 7.50 ಕೋಟಿ ರೂ.ವೆಚ್ಚದಲ್ಲಿ ಮೂರು ಪ್ರಮುಖ ರಸ್ತೆಗಳ ಅಭಿವೃದ್ಧಿ, ಹೂಡಿಯಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ, ವರ್ತೂರು ಕೋಡಿ ರಸ್ತೆಯ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.

ಬೆಳ್ಳಂದೂರು ಕೆರೆಯ ಸಮಸ್ಯೆಗೆ ಮುಕ್ತಿ ಕಲ್ಪಿಸಲು ವಿವಿಧ ಇಲಾಖೆಗಳ ನುರಿತ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ 1 ಮತ್ತು 2ನೇ ಹಂತದ ಕಾಮಗಾರಿಗಳು ಆರಂಭವಾಗಿದೆ. ಕೆರೆಯ ನೈರ್ಮಲ್ಯಗಳನ್ನು ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಕೆರೆ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದ ಕೆರೆಗೆ ಹಾನಿಕಾರಕವಾದ ಕಾರ್ಖಾನೆಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ತಿಳಿಸಿದರು.

ಬೆಳ್ಳಂದೂರು ಕೆರೆ ಜೊತೆಗೆ ರಾಂಪುರ, ಕಲ್ಕೆರೆ ಕೆರೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಅವನತಿಯ ಅಂಚಿನಲ್ಲಿರುವ ಬೆಂಗಳೂರಿನ ಎಲ್ಲ ಕೆರೆಗಳಿಗೂ ಕಾಯಕಲ್ಪ ನೀಡಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಜಾರ್ಜ್ ಹೇಳಿದರು.

ಮೇಯರ್ ಜಿ.ಪದ್ಮಾವತಿ ಮಾತನಾಡಿ, ಬೆಳ್ಳಂದೂರು ಕೆರೆಯಲ್ಲಿ ನೊರೆ ಕಾಣಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಯ ಮಂಡಲಿ ನೀಡಿರುವ ಆದೇಶಕ್ಕೆ ನಾವು ಗೌರವ ನೀಡುತ್ತೇವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಳ್ಳಂದೂರು ಕೆರೆಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿರುವ ಕುರಿತು ತಿಳಿಸಿರುವ ಸಚಿವ ಕೆ.ಜೆ.ಜಾರ್ಜ್, ಇಂದು ಮಹದೇವಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಕಾಲಮಿತಿಯೊಳಗೆ ಈ ಕಾಮಗಾರಿಗಳು ಪೂರ್ಣಗೊಂಡು ನಗರಕ್ಕೆ ಹೊಸ ರೂಪ ಸಿಗಲಿ ಎಂದು ಹಾರೈಸಿದರು.

ಬೆಳ್ಳಂದೂರು ಕೆರೆ ಸಂರಕ್ಷಣೆ ಕುರಿತು ನಾವು ಹಲವು ಹೋರಾಟಗಳನ್ನು ನಡೆಸಿದರು ಸರಕಾರ ಯಾವುದೆ ಕ್ರಮ ಕೈಗೊಂಡಿರಲಿಲ್ಲ. ಆದರೆ, ಇದೀಗ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಛೀಮಾರಿ ಹಾಕಿರುವುದರಿಂದ ಸರಕಾರದ ಕಣ್ಣು ತೆರೆದಿದೆ. ಸರಕಾರ ಇನ್ನಾದರೂ ಜಡತ್ವವನ್ನು ಬಿಟ್ಟು ಕೆರೆಯ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರಾದ ಉದಯ್ ಕುಮಾರ್, ಶ್ವೇತಾ ವಿಜಯಕುಮಾರ್, ಹರಿಪ್ರಸಾದ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಬಿಡಿಎ ಹಾಗೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪಟಾಕಿ ಕಸ ಗುಡಿಸಿದ ಶಾಸಕ

 ವರ್ತೂರು ಕೋಡಿ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಸಚಿವ ಕೆ.ಜೆ.ಜಾರ್ಜ್ ಆಗಮಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಸಿಡಿಸಿದ ಪಟಾಕಿಗಳಿಂದ ಉಂಟಾದ ಕಸವನ್ನು ಶಾಸಕ ಅರವಿಂದ ಲಿಂಬಾವಳಿ ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News