ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆ ಅಗತ್ಯ: ಸಿದ್ದರಾಮಯ್ಯ
ಬೆಂಗಳೂರು, ಎ.21: ದೇಶದೆಲ್ಲೆಡೆ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯಗಳಿಸಿದ ನೂತನ ಶಾಸಕರಾದ ಕಳಲೆ ಕೇಶವಮೂರ್ತಿ ಹಾಗೂ ಡಾ.ಗೀತಾ ಮಹದೇವಪ್ರಸಾದ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಾಲಿ ರಾಷ್ಟ್ರಪತಿ ಪ್ರಣವ್‌ಮುಖರ್ಜಿ ಅವರ ಅಧಿಕಾರವಧಿ ಜುಲೈನಲ್ಲಿ ಅಂತ್ಯಗೊಳ್ಳುತ್ತಿದ್ದು, ನೂತನ ರಾಷ್ಟ್ರಪತಿಯ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಯು ಮುಖಂಡ, ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿರುವ ಕುರಿತು ಸಿದ್ದರಾಮಯ್ಯ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ದೇಶದಲ್ಲಿರುವ ಎಲ್ಲ ಜಾತ್ಯತೀತ ಶಕ್ತಿಗಳು, ಕೋಮುವಾದಿ ಶಕ್ತಿಗಳ ವಿರುದ್ಧ ಒಂದಾಗಬೇಕಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯೇತರ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಕೋಮುವಾದಿ ಶಕ್ತಿಗಳ ವಿರುದ್ಧ ಎಲ್ಲರೂ ಸೇರಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಧಾನಮಂತ್ರಿ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳಲು ಹೊಸದಿಲ್ಲಿಗೆ ತೆರಳುತ್ತಿದ್ದು, ಸಚಿವ ಸಂಪುಟದಲ್ಲಿ ಖಾಲಿಯಿರುವ ಎರಡು ಸ್ಥಾನಗಳನ್ನು ಭರ್ತಿ ಮಾಡುವ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಬೇಕಿತ್ತು. ಇಂದು ನಾನು ಹಾಗೂ ದೇವೇಗೌಡರು ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರು ಆಗಮಿಸುತ್ತಿಲ್ಲ. ಆದಷ್ಟು ಶೀಘ್ರದಲ್ಲೆ ಅವರನ್ನು ಭೇಟಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
ಭೂ ಹಗರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ಎಂ.ಕೃಷ್ಣಪ್ಪ ವಿರುದ್ಧ ಕೇಳಿ ಬಂದಿರುವ ಆರೋಪದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮಧ್ಯವರ್ತಿಗಳು ಮಾಡಿರುವ ತಪ್ಪಿಗೆ ಸಚಿವರನ್ನು ಹೊಣೆಗಾರರನ್ನಾಗಿಸಲು ಸಾಧ್ಯವೇ. ಈ ಪ್ರಕರಣದಲ್ಲಿ ಅವರ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.