ಭೂಹೀನರಿಗೆ ತಿಂಗಳ ಅಂತ್ಯದೊಳಗೆ ಭೂಮಿ ಹಂಚಿಕೆಯಾಗದ್ದಿರೆ ಉಗ್ರ ಚಳವಳಿ: ಎಚ್.ಎಸ್.ದೊರೆಸ್ವಾಮಿ
ಬೆಂಗಳೂರು, ಎ. 21: ಮುಂದಿನ ತಿಂಗಳೊಳಗೆ ಸರಕಾರ ನೀಡುರುವ ಭರವಸೆಯಂತೆ ರಾಜ್ಯದಲ್ಲಿ ಭೂ ಹೀನರಿಗೆ ಎರಡು ಎಕರೆ ಜಮೀನು ನೀಡಲು ಮುಂದಾಗಲಿಲ್ಲ ಎಂದಾದರೆ ಉಗ್ರ ಚಳವಳಿ ಹಮ್ಮಿಕೊಳ್ಳಲಾಗುತ್ತದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದ್ದಾರೆ.
ವಿಶ್ವ ಭೂದಿನಾಚರಣೆ ಮತ್ತು ಗ್ರೀನ್‌ಪಾರ್ಕ್‌ನ 10ನೆ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ‘ಎರಡು ದಿನಗಳ ಸಾವಯವ ಮತ್ತು ಸಿರಿಧಾನ್ಯ ಸಂಜೆ’ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳು ಕಳೆಯುತ್ತಿದ್ದರೂ ಭೂ ಹೀನರು ಭೂಮಿಯಿಲ್ಲದೆ ಜೀವನ ನಡೆಸುತ್ತಿದ್ದು, ಉಳ್ಳವರು ಬಡವರ ಸ್ವಾತಂತ್ರವನ್ನು ಬಳಸಿಕೊಂಡು ಇನ್ನಷ್ಟು ಬಲಿಷ್ಠರಾಗುತ್ತಿದ್ದಾರೆ. ರಾಜಕಾರಣಿಗಳಿಗೆ ವೋಟು ಕೊಟ್ಟ ತಪ್ಪಿಗೆ ಬಡವರನ್ನು ಬಡವರಾಗಿಯೇ ಉಳಿಸಿ, ಅವರು ಬೆಳೆಯುತ್ತಿದ್ದಾರೆ. ಅಧಿಕಾರಿಗಳು ಕೋಟ್ಯಂತರ ರೂ.ಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದಿನ ದಿನಗಳಲ್ಲಿ ಭೂಮಿ ಮಾರಾಟದ ವಸ್ತುವಾಗಿರಲಿಲ್ಲ. ಆದರೆ, ಕೈಗಾರೀಕರಣ ಹಾಗೂ ಜಾಗತೀಕರಣ ಪ್ರಭಾವದಿಂದ ಇತ್ತೀಚಿನ ದಿನಗಳಲ್ಲಿ ಅದು ಮಾರಾಟದ ವಸ್ತುವಾಗಿದೆ. ದೇಶದ ಸಂಪತ್ತು ಕೆಲವೇ ಕೆಲವು ಮಂದಿಯ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇಂತಹ ವ್ಯವಸ್ಥೆ ಬದಲಾಗಬೇಕು. ದುಡಿಯಲು ಭೂಮಿ, ವಾಸಿಸಲು ಮನೆ ಇಲ್ಲದ ನಿರ್ಗತಿಕರಿಗೆ ಭೂಮಿ, ಮನೆ ಸಿಗಬೇಕು ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ವಿವಿಧ ಪಕ್ಷಗಳು ಅಧಿಕಾರ ನಡೆಸಿಕೊಂಡು ಬಂದಿವೆ. ಆದರೆ, ಬಡವರ ಕಷ್ಟಗಳನ್ನು ಯಾರೂ ಕೇಳಿಲ್ಲ. ಈಗಲಾದರೂ ಬಡವರಿಗೆ ಭೂಮಿ ಹಂಚಿಕೆ ಮಾಡಲು ಮುಂದಾಗುವ ಅಗತ್ಯ ಮತ್ತು ಅನಿವಾರ್ಯತೆ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಭೂಮಿಯನ್ನು ಭೋಗದವಸ್ತು ಎಂದು ಭಾವಿಸಿದ್ದಾರೆ. ಆದರೆ, ಭಾರತೀಯರು ಭೂಮಿಗೆ ತಾಯಿಯ ಪಟ್ಟ ನೀಡಿ ಗೌರಸುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಅಭಿವೃದ್ಧಿಯ ಹೆಸರಲ್ಲಿ ಭೂಮಿಯನ್ನು ವಿಷಮಯವನ್ನಾಗಿಸುತ್ತಿದ್ದಾರೆ. ಆಕಾಶವನ್ನು ಕೂಡಾ ಕಲುಷಿತಗೊಳಿಸುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ಸೂರ್ಯನ ಕಿರಣ ನೇರವಾಗಿ ಭೂಮಿಗೆ ಬಿದ್ದು ಇಡೀ ಜನ ಸುಟ್ಟು ಹೋಗುತ್ತಾರೆ. ಓಝೋನ್ ಪದರದ ರಕ್ಷಣೆಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಅವರು ನುಡಿದರು.