ವೇಶ್ಯಾವಾಟಿಕೆ ದಂಧೆ: 5 ಲಕ್ಷ ರೂ.ಪಡೆದು ಬಾಗಿಲಿನಲ್ಲಿ ಕಾವಲು ನಿಲ್ಲುತ್ತಿದ್ದ ಪೊಲೀಸ್ ಪೇದೆ!

Update: 2017-04-23 14:57 GMT

ಬೆಂಗಳೂರು, ಎ.23: ಬಂಗಲೆಯೊಂದರಲ್ಲಿ ಹೈಟೆಕ್ ವೇಶ್ಯಾವಟಿಕೆ ನಡೆಯುತ್ತಿದ್ದ ಪ್ರಕರಣ ಸಂಬಂಧ ಮೈಕೋಲೇಔಟ್ ಠಾಣಾ ಪೊಲೀಸರು ಪೇದೆಯೊಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಈತ ತಿಂಗಳಿಗೆ 5 ಲಕ್ಷ ರೂ. ಪಡೆದು ಬಂಗಲೆಯ ಬಾಗಿಲಿಗೆ ಕಾವಲು ನಿಲ್ಲುತ್ತಿದ್ದ ಎನ್ನುವ ಮಾಹಿತಿ ಗೊತ್ತಾಗಿದೆ.

ನಗರದ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸ್ ಪೇದೆ ಕರಿಬಸಪ್ಪ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.

ಇಲ್ಲಿನ ಬಿಟಿಎಂ ಲೇಔಟ್‌ನ ಬಂಗಲೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಇತ್ತೀಚಿಗಷ್ಟೇ, ಮೈಕೋಲೇಔಟ್ ಠಾಣಾ ಪೊಲೀಸರು ಬಂಗಲೆ ಮೇಲೆ ದಾಳಿ ನಡೆಸಿ ನರೇಶ್ ಸಿಂಗ್, ಉಸ್ಮಾನ್ ಸೇರಿ ಮೂವರನ್ನು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ತೀವ್ರಗೊಳಿಸಿದ್ದ ವೇಳೆ ತಮ್ಮ ದಂಧೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೇದೆಯೊಬ್ಬರು ಸಹಾಯ ಮಾಡುತ್ತಿದ್ದರು ಎಂದು ಹೇಳಿದ್ದರು. ಬಳಿಕ ಆರೋಪಿ ಕರಿಬಸಪ್ಪನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ ಬಂಧಿಸಿದ್ದಾರೆ.

ಮಾಸಿಕ 5 ಲಕ್ಷ ನೀಡಿ, ಮಾಮೂಲಿ ನೀಡಬೇಕು: ವೇಶ್ಯಾವಾಟಿಕೆಗೆ ಕಾವಲು ನಿಲ್ಲುತ್ತಿದ್ದ ಆರೋಪ ಎದುರಿಸುತ್ತಿರುವ ಪೇದೆ ಕರಿಬಸಪ್ಪ, ಆರೋಪಿಗಳಿಂದ ತಿಂಗಳಿಗೆ 5 ಲಕ್ಷ ರೂ. ಪಡೆಯುತ್ತಿದ್ದ ಎನ್ನಲಾಗಿದೆ. ಅಲ್ಲದೆ, ತಾನು ಪೊಲೀಸ್ ಅಧಿಕಾರಿಗಳಿಗೂ ಮಾಮೂಲಿ ನೀಡಬೇಕು. ನೆಟ್‌ಬ್ಯಾಂಕಿಗ್‌ನಲ್ಲಿ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದ ಎಂದು ಹೇಳಲಾಗಿದೆ.

ಪ್ರಕರಣ ವಿವರ: ಪ್ರಮುಖ ಆರೋಪಿ ಉಸ್ಮಾನ್ ಎಂಬಾತ ವೆಬ್ ಸೈಟ್ ಒಂದನ್ನು ತೆರೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ವೆಬ್ ಸೈಟ್ ನಲ್ಲಿ ಹುಡುಗಿಯರ ಭಾವಚಿತ್ರವನ್ನು ಹಾಕಿ ಗಿರಾಕಿಗಳಿಗೆ ಆನ್‌ಲೈನ್‌ನಲ್ಲಿ ಹಣವನ್ನು ಪಾವತಿ ಮಾಡುವಂತೆ ಹೇಳುತ್ತಿದ್ದ. ನಗರದ ಬಿಟಿಎಂ ಲೇಔಟ್ ನಲ್ಲಿ ಉದ್ಯಮಿಯೊಬ್ಬರಿಂದ ಮನೆಯನ್ನು ಪಡೆದುಕೊಂಡಿದ್ದ. ಬಂಗಲೆ ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿರುವ ವಿಚಾರ ಮನೆಯ ಮಾಲಕರಿಗೆ ತಿಳಿದಿರಲಿಲ್ಲ. ದೊಡ್ಡ ಉದ್ಯಮಿಗಳು, ಸರಕಾರಿ ಅಧಿಕಾರಿಗಳು, ಟೆಕ್ಕಿಗಳನ್ನು ಸಂಪರ್ಕಿಸುತ್ತಿದ್ದ ಈತನ ತಂಡ ಗ್ರಾಹಕರಿಂದ 25 ಸಾವಿರ ರೂ., 30 ಸಾವಿರ ರೂ. ಹಣ ಪಡೆಯುತ್ತಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News