ಮಹಿಳೆಯರ ಸಮಾನತೆಗಾಗಿ ‘ಮಹಿಳಾ ಸಬಲೀಕರಣ ಕಾರ್ಯ ನೀತಿ’ ಶೀಘ್ರ ಜಾರಿ: ಸಚಿವೆ ಉಮಾಶ್ರೀ

Update: 2017-04-24 12:40 GMT

ಬೆಂಗಳೂರು, ಎ. 24: ರಾಜ್ಯದಲ್ಲಿ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನ ಅವಕಾಶ, ಸಮಾನ ಹಕ್ಕು ಮತ್ತು ಸೌಲಭ್ಯಗಳನ್ನು ಒದಗಿಸಲು ಹಾಗೂ ಲಿಂಗಾಧಾರಿತ ಸಮಾನತೆ ತತ್ವವನ್ನು ಅನುಷ್ಠಾನಕ್ಕೆ ತರಲು ‘ಮಹಿಳಾ ಸಬಲೀಕರಣ ಕಾರ್ಯ ನೀತಿ’ ಶೀಘ್ರದಲ್ಲೆ ಜಾರಿಗೆ ತರಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಉಮಾಶ್ರೀ ಹೇಳಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರ ಸಬಲೀಕರಣ ಕಾರ್ಯ ನೀತಿ-2016-17ರ ಕರಡು ನೀತಿ ಬಗ್ಗೆ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಕಾರ್ಯನೀತಿಯನ್ನು ಕುರಿತಂತೆ ಮುಖ್ಯಮಂತ್ರಿ ತಮ್ಮ ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದರು.

ಅದರಂತೆ ಈ ಕಾರ್ಯನೀತಿಯ ಕರಡನ್ನು ಸಿದ್ಧಪಡಿಸಲಾಗಿದೆ. ಅಂತಿಮ ನೀತಿಯನ್ನು ಸಿದ್ಧಪಡಿಸುವ ಮುನ್ನ ಸಂಘ-ಸಂಸ್ಥೆಗಳು ಮತ್ತು ವಿಷಯ ಪರಿಣಿತರ ಅಭಿಪ್ರಾಯವನ್ನು ಪಡೆದು ಈ ಕಾರ್ಯನೀತಿಯನ್ನು ಅಂತಿಮಗೊಳಿಸಲಾಗುತ್ತದೆ. ಅದರ ಭಾಗವಾಗಿ ಇಂದಿನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣ ಕಾರ್ಯನೀತಿಯನ್ನು ಶಕ್ತಿಯುತವಾಗಿ ರೂಪಿಸಲು ಸಮಾಜದ ಎಲ್ಲ ಸ್ಥರದ ಮಹಿಳೆಯರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ವಿಶೇಷವಾಗಿ ಶೈಕ್ಷಣಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಂಬಂಧಪಟ್ಟ ಹಾಗೆ ಆದ್ಯತೆ ನೀಡಲಾಗುವುದು. ಅದರ ಜೊತೆಗೆ ನಾನಾ ರೀತಿಯ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳಿಗೆ ಬಲ ನೀಡುವ ದಿಸೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತದೆ. ತಮ್ಮದಲ್ಲದ ತಪ್ಪಿಗೆ ಅಂದರೆ ಎಚ್‌ಐವಿ ಪೀಡಿತರು ಹಾಗೂ ದೌರ್ಜನ್ಯಕ್ಕೆ ಒಳಗಾದವರಿಗೆ, ಮಾರಣಾಂತಿಕ ಹಲ್ಲೆಗೊಳಗಾದವರಿಗೆ ರಕ್ಷಣೆ ಮತ್ತು ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.

ಈ ದಿಸೆಯಲ್ಲಿ ಈಗಾಗಲೇ ಸಶಕ್ತವಾದ ಕಾಯಿದೆಯೊಂದನ್ನು ರೂಪಿಸುವ ಸಲುವಾಗಿ ವಿಧೇಯಕ ಸಿದ್ಧಪಡಿಸಲಾಗುತ್ತಿದೆ. ಮುಂಬರುವ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆದಿದೆ ಎಂದ ಅವರು, ಲಿಂಗಾಧಾರಿತ ಪ್ರತಿಸ್ಪಂದನೆಯುಳ್ಳ ಆಡಳಿತ, ಶಾಸಕಾಂಗ, ನ್ಯಾಯಾಂಗಗಳ ವ್ಯಾಪ್ತಿಯಲ್ಲಿ ನಿರ್ದಿಷ್ಟ ಚೌಕಟ್ಟನ್ನು ನಿರ್ಮಿಸಿ ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಅವಕಾಶ ನೀಡುವುದೇ ಈ ಕಾರ್ಯನೀತಿಯ ಉದ್ದೇಶ ಎಂದರು.

ಸಮಾರಂಭದಲ್ಲಿ ಮೇಲ್ಮನೆ ಸದಸ್ಯ ಎನ್.ಅಪ್ಪಾಜಿಗೌಡ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತೀ ಶಂಕರ್, ಬಾಲಭವನ ಸೊಸೈಟಿ ಅಧ್ಯಕ್ಷೆ ಅಂಜಲಿ ನಿಂಬಾಳ್ಕರ್, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ನಿರ್ದೇಶಕಿ ದೀಪಾ ಚೋಳನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News