ಹಣಕ್ಕಾಗಿ ಜನರ ಪರದಾಟ: ತಲೆ ಕೆಡಿಸಿಕೊಳ್ಳದ ಕೇಂದ್ರ ಸರಕಾರ; ಖರ್ಗೆ ವಾಗ್ದಾಳಿ

Update: 2017-04-24 15:26 GMT

ಕಲಬುರಗಿ, ಎ. 24: ಗರಿಷ್ಠ ಮೊತ್ತದ 500, 1000 ರೂ.ನೋಟುಗಳ ಚಲಾವಣೆ ನಿಷೇಧಿಸಿ 6 ತಿಂಗಳು ಕಳೆದರೂ, ದುಡ್ಡಿಗಾಗಿ ಜನ ಸಾಮಾನ್ಯರ ಪರದಾಟ ಇನ್ನೂ ತಪ್ಪಿಲ್ಲ. ಎಟಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಕೇಂದ್ರ ಸರಕಾರ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಇನ್ನೂ ಹಳೆಯ ನೋಟುಗಳ ದಂಧೆ ನಡೆಯುತ್ತಿದೆ ಎಂದು ಬಿಂಬಿಸುವ ಮೂಲಕ ಜನರನ್ನು ಮರುಳು ಮಾಡಲಾಗುತ್ತಿದೆ. ಆದಾಯ ತೆರಿಗೆ ಇಲಾಖೆ ಕೇವಲ ಕಾಂಗ್ರೆಸ್ ಮುಖಂಡರನ್ನು ಗುರಿಯನ್ನಾಗಿಸಿಕೊಂಡು ದಾಳಿ ನಡೆಸುತ್ತಿರುವುದು ದುರುದ್ದೇಶಪೂರಿತ ಎಂದರು.

ಹಲವು ರಾಜ್ಯಗಳಲ್ಲಿ ಚುನಾವಣೆ ಎದುರಾಗುತ್ತಿರುವ ಸಂದರ್ಭದಲ್ಲೆ ವಿಪಕ್ಷಗಳ ಮೇಲೆ ತಪ್ಪು ಭಾವನೆ ಮೂಡಿಸಲು ಆದಾಯ ತೆರಿಗೆ ಇಲಾಖೆ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಯುಪಿಎ ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ತನ್ನದೆಂದು ಬಿಂಬಿಸಿಕೊಳ್ಳುತ್ತಿದ್ದಾರೆಂದು ಖರ್ಗೆ ವಾಗ್ದಾಳಿ ನಡೆಸಿದರು.

ಕೈ ಅಭ್ಯರ್ಥಿ ಸ್ಪರ್ಧೆ: ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಈ ಬಗ್ಗೆ ಎಲ್ಲರ ಒಮ್ಮತದಿಂದ ಪಕ್ಷದಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗುವುದು. ಅಲ್ಲದೆ, ಒಮ್ಮತದಿಂದ ರಾಷ್ಟ್ರಪತಿ ಆಯ್ಕೆಗೆ ಪ್ರಧಾನಿ ಮೋದಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News