ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Update: 2017-04-25 13:45 GMT

►ಅಭ್ಯರ್ಥಿಗಳು ಮಾನ್ಯತೆ ಇರುವ ಗುರುತಿನ ಚೀಟಿ ಹೊಂದಿರಬೇಕು

► ಗಡಿಯಾರ, ಟ್ಯಾಬ್ಲೆಟ್, ಮೊಬೈಲ್, ಕ್ಯಾಲ್ಕುಲೇಟರ್ ತರುವಂತಿಲ್ಲ

► ಓಎಂಆರ್ ಉತ್ತರ ಪತ್ರಿಕೆಯಲ್ಲಿ ಶೇಡ್ ಮಾಡುವುದರ ಮೂಲಕ ಉತ್ತರಿಸಬೇಕು

► ನೀಲಿ ಅಥವಾ ಕಪ್ಪು ಶಾಹಿಯ ಬಾಲ್‌ಪಾಯಿಂಟ್ ಪೆನ್ ತೆಗೆದುಕೊಂಡು ಹೋಗಬೇಕು

ಬೆಂಗಳೂರು, ಎ.25: ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯು ಮೇ 2 ಮತ್ತು 3ರಂದು ನಡೆಯಲಿದ್ದು, ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಮೇ 4ರಂದು ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ಮೇ 2 ರಂದು ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತಶಾಸ್ತ್ರ, ಮೇ 3ರಂದು ಬೆಳಗ್ಗೆ 10.30 ರಿಂದ 11.50ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ, ಮೇ 4ರಂದು ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ(ಬೆಂಗಳೂರು ಕೇಂದ್ರದಲ್ಲಿ ಮಾತ್ರ)ನಡೆಯಲಿದೆ.

ರಾಜ್ಯಾದ್ಯಂತ ಒಟ್ಟು 404 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಈ ಪೈಕಿ 82 ಪರೀಕ್ಷಾ ಕೇಂದ್ರಗಳು ಬೆಂಗಳೂರಿನಲ್ಲಿವೆ. ಒಟ್ಟು 1,85,411 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದಾರೆ. ಈ ಪೈಕಿ 94,415 ಪುರುಷ ಅಭ್ಯರ್ಥಿಗಳು ಹಾಗೂ 90,996 ಮಹಿಳಾ ಅಭ್ಯರ್ಥಿಗಳಿದ್ದಾರೆ.

ಪರೀಕ್ಷೆಗಳಿಗಾಗಿ ಒಟ್ಟು 404 ವೀಕ್ಷಕರು, 808 ವಿಶೇಷ ಜಾಗೃತ ದಳದ ಸದಸ್ಯರು, 404 ಪ್ರಶ್ನೆಪತ್ರಿಕೆ ಪಾಲಕರು, ಸುಮಾರು 11,625 ಕೊಠಡಿ ಮೇಲ್ವಿಚಾರಕರು ಹಾಗೂ 32 ಸಾವಿರ ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ನೇಮಿಸಲಾಗಿದೆ. ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಮೇ 4ರಂದು ಬೆಂಗಳೂರು ಕೇಂದ್ರದಲ್ಲಿ ನಡೆಸಲಾಗುತ್ತಿದ್ದು, ಇದರಲ್ಲಿ ಸುಮಾರು 1800 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.
ಮೊದಲ ಬಾರಿಗೆ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಮುದ್ರಿಸಲಾಗುತ್ತಿದೆ. ಅಭ್ಯರ್ಥಿಗಳು ಮೇ 3ರಂದು ಎರಡನೆ ದಿನದ ಕೊನೆಯ ಅವಧಿಯ ಪರೀಕ್ಷೆ ಮುಗಿದ ನಂತರ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಂದ ಬ್ರೋಚರ್ ಅನ್ನು ಪಡೆದುಕೊಳ್ಳಬೇಕು.

ಉತ್ತರಗಳನ್ನು ಓಎಂಆರ್ ಉತ್ತರ ಪತ್ರಿಕೆಯಲ್ಲಿ ಶೇಡ್ ಮಾಡುವುದರ ಮೂಲಕ ಉತ್ತರಿಸಬೇಕಾಗಿರುವುದರಿಂದ, ಅಭ್ಯರ್ಥಿಗಳು ತಮ್ಮ ಜೊತೆಯಲ್ಲಿ ನೀಲಿ ಅಥವಾ ಕಪ್ಪು ಶಾಹಿಯ ಬಾಲ್‌ಪಾಯಿಂಟ್ ಪೆನ್ ಅನ್ನು ತೆಗೆದುಕೊಂಡು ಹೆಗಬೇಕು.

ಅಭ್ಯರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ, ಹಾಗೆಯೇ ಪರೀಕ್ಷೆಯ ಮೊದಲನೆ ಬೆಲ್ ಆಗುವ ಅರ್ಧಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕು. ಪ್ರವೇಶ ಪತ್ರದ ಜೊತೆಯಲ್ಲಿ ಕಡ್ಡಾಯವಾಗಿ ಮಾನ್ಯತೆ ಇರುವ ಯಾವುದಾದರೂ ಒಂದು ಕಾಲೇಜಿನ ಗುರುತಿನ ಚೀಟಿ, ದ್ವಿತೀಯ ಪಿಯುಸಿ, 12ನೆ ತರಗತಿಯ ಪ್ರವೇಶಪತ್ರ, ಬಸ್‌ಪಾಸ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಆಧಾರ್‌ಕಾರ್ಡ್, ಪಾನ್‌ಕಾರ್ಡ್ ಅ್ನು ತೆಗೆದುಕೊಂಡು ಹೋಗಬೇಕು.

ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೆ ರೀತಿಯ ಕೈಗಡಿಯಾರವನ್ನು ಕಟ್ಟಿಕೊಂಡು, ತೆಗೆದುಕೊಂಡು ಹೋಗುವಂತಿಲ್ಲ. ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಯಾವುದೆ ಟ್ಯಾಬ್ಲೆಟ್, ಮೊಬೈಲ್, ಕ್ಯಾಲ್ಕುಲೇಟರ್‌ಗಳನ್ನು ತರುವಂತಿಲ್ಲ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರತಿ ಪರೀಕ್ಷಾ ಕೇಂದ್ರಗಳಿಗೆ, ಖಜಾನೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನೀಡುವ ಸಂಬಂಧ ಆಯಾ ಜಿಲ್ಲೆಯ ಎಸ್ಪಿಗಳಿಗೆ ಸೂಕ್ತ ನಿರ್ದೇಶನ ನೀಡಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಕೋರಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News