ಬಾಬಾಬುಡನ್‌ಗಿರಿ ವಿವಾದ ಇತ್ಯರ್ಥಕ್ಕೆ ಆಗ್ರಹ

Update: 2017-04-25 12:07 GMT

ಬೆಂಗಳೂರು, ಎ. 25: ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿ ಮತ್ತು ದತ್ತಾತ್ರೇಯ ಪೀಠದ ವಿವಾದವನ್ನು ಶಾಶ್ವತವಾಗಿ ಬಗೆಹರಿಸಲು ಸರಕಾರ ಮುಂದಾಗಬೇಕು ಎಂದು ಧಾರ್ಮಿಕ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಒತ್ತಾಯಿಸಿದೆ.

ಮಂಗಳವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗ, ಕಂದಾಯ ಮತ್ತು ಮುಜರಾಯಿ ಇಲಾಖೆಗಳ ದಾಖಲೆ ಪ್ರಕಾರ ದತ್ತಾತ್ರೇಯ ಸ್ವಾಮಿ ಪೀಠದ ದೇವಸ್ಥಾನದ ಗುಹೆ ಮಂದಿರ ಮತ್ತು ಬಾಬಾಬುಡನ್‌ಗಿರಿ ದರ್ಗಾದ ಪಹಣಿ(ಆರ್‌ಟಿಸಿ) ಬೇರೆ ಬೇರೆ ಇವೆ. ಪೀಠದ ಕುರಿತು ಇರುವ ವಿವಾದವನ್ನು ಬಗೆಹರಿಸಿ ದತ್ತಾತ್ರೇಯ ಸ್ವಾಮಿ ಪೀಠದ ದೇವಸ್ಥಾನದಲ್ಲಿ ಹಿಂದು ಧಾರ್ಮಿಕ ವಿಧಾನ ಪ್ರಕಾರ ಪೂಜಾ-ಕೈಂಕರ್ಯಗಳಿಗೆ ಅವಕಾಶ ಕಲ್ಪಿಸಲು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

ಮುಖ್ಯಮಂತ್ರಿ ಭೇಟಿ ಬಳಿಕ ಬಿಜೆಪಿಯ ಮುಖಂಡ ಸಿ.ಟಿ. ರವಿ ಮಾತನಾಡಿ, ಬಾಬಾಬುಡನ್‌ಗಿರಿ ಹಾಗೂ ದತ್ತಪೀಠದ ಸಮಸ್ಯೆಯನ್ನು ಮೇ 9ರೊಳಗಾಗಿ ಬಗೆಹರಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸರಕಾರ ರಾಜಕೀಯವನ್ನು ಬದಿಗಿಟ್ಟು ವಿವಾದ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು. ದತ್ತ ಪೀಠ ಮತ್ತು ಬಾಬಾಬುಡನ್‌ಗಿರಿಯಲ್ಲಿ ಮುಸ್ಲಿಮ್ ಮತ್ತು ಹಿಂದೂಗಳು ಪದ್ದತಿಯಂತೆ ಧರ್ಮಾಚರಣೆ ಮಾಡಲು ಅವಕಾಶ ನೀಡಬೇಕು. ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, ದತ್ತಮಾಲಾ ಅಭಿಯಾನ ಮತ್ತು ಬಸವಜಯಂತಿ ಆಚರಣೆ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದರು.

ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ. ಸರಕಾರ ಸಮಸ್ಯೆಯನ್ನು ಬಗೆಹರಿಸಲಿದೆ ಎಂಬ ವಿಶ್ವಾಸವೂ ಇದೆ ಎಂದು ತಿಳಿಸಿದರು.

ನಿಯೋಗದಲ್ಲಿ ಕಡೂರಿನ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News