​ನಕಲಿ ನೋಟು ನೀಡಿ 1 ಕೆ.ಜಿ. ಚಿನ್ನ ಲೂಟಿ!

Update: 2017-04-25 14:17 GMT

ಬೆಂಗಳೂರು, ಎ.25: ಗ್ರಾಹಕನಂತೆ ನಟಿಸಿ, ನಕಲಿ ನೋಟು ನೀಡಿ ಚಿನ್ನದ ವ್ಯಾಪಾರಿಯಿಂದ ಒಂದು ಕೆ.ಜಿ. ಚಿನ್ನಾಭರಣ ಪಡೆದು ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ನಗರದ ಹಡ್ಸನ್ ವೃತ್ತದ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ನಗರತ್‌ ಪೇಟೆಯ ಎಸ್‌ಪಿಇ ಡೈಮಂಡ್(ವಜ್ರ) ಕಾಂಪ್ಲೆಕ್ಸ್‌ನಲ್ಲಿ ಆಭರಣ ಅಂಗಡಿಯನ್ನಿಟ್ಟುಕೊಂಡಿದ್ದ ದಿನೇಶ್‌ಕುಮಾರ್ ಎಂಬವರಿಂದ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಚಿನ್ನ ಲೂಟಿ ಮಾಡಿದ್ದಾನೆ ಎನ್ನಲಾಗಿದೆ.

ರವಿವಾರ ರಾತ್ರಿ ಅಂಗಡಿ ಮಾಲಕ ದಿನೇಶ್‌ಕುಮಾರ್ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿ ಸಂಬಂಧಿಕರ ಹೆಸರು ಹೇಳಿ ಪರಿಚಯಿಸಿಕೊಂಡಿದ್ದಾನೆ. ಬಳಿಕ ಇದೇ ವಾರದಲ್ಲಿ ಮದುವೆ ಇದೆ. ಹೀಗಾಗಿ, 1 ಕೆ.ಜಿ. ಚಿನ್ನಾಭರಣ ಬೇಕೆಂದು ಹೇಳಿದ್ದಾನೆ. ಈ ಸಂದರ್ಭ ಉತ್ತರಿಸಿದ ದಿನೇಶ್ ಅಂಗಡಿಗೆ ಬಂದು ಚಿನ್ನಾಭರಣ ತೆಗೆದುಕೊಳ್ಳಿ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ವ್ಯಕ್ತಿ ಅಂಗಡಿಗೆ ಬರಲು ಸಾಧ್ಯವಾಗುತ್ತಿಲ್ಲ. ಕೆ.ಜಿ.ರಸ್ತೆಯ ಕಾವೇರಿ ಭವನ ಎದುರಿನ ಶಿಕ್ಷಕರ ಸದನ ಬಳಿಗೆ ಚಿನ್ನಾಭರಣ ತನ್ನಿ ಎಂದು ಸೂಚಿಸಿದ್ದಾರೆ.

ಅದರಂತೆ ಸೋಮವಾರ ರಾತ್ರಿ 9:30ಕ್ಕೆ ದಿನೇಶ್‌ಕುಮಾರ್ ಕಾರಿನಲ್ಲಿ ತೆರಳಿ ಒಂದು ಕೆ.ಜಿ. ಚಿನ್ನಾಭರಣಗಳನ್ನು ನೀಡಿದ ಬಳಿಕ, ಆತ ಕಾರಿನಲ್ಲಿಯೇ ಕುಳಿತು 32 ಲಕ್ಷ ರೂ. ನೀಡಿದ್ದಾನೆ. ನಂತರ ಮನೆಗೆ ಬಂದು ನೋಟುಗಳನ್ನು ನೋಡಿದಾಗ ಆತ ನೀಡಿದ್ದ ನೋಟುಗಳೆಲ್ಲವೂ ನಕಲಿ ಎಂದು ತಿಳಿದು ಬಂದಿದೆ.

ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News