‘ಅರಿವು’ ಶಿಕ್ಷಣ ಸಾಲ ಯೋಜನೆಯನ್ನು ಬಳಸಿಕೊಳ್ಳಿ: ಮುಖ್ಯಮಂತ್ರಿ

Update: 2017-04-25 15:00 GMT

ಬೆಂಗಳೂರು, ಎ.25: ಮತೀಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸುವ ಮೂಲಕ ‘ಅರಿವು’ ಶಿಕ್ಷಣ ಸಾಲ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ‘ಅರಿವು’ ಶಿಕ್ಷಣ ಸಾಲ ಯೋಜನೆಯಡಿ ಆಯ್ಕೆಯಾದ ಫಲಾನುಭವಿ ಮತೀಯ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವು ಒದಗಿಸಲು ಬೋಧನಾ ಶುಲ್ಕವನ್ನು ಮುಂಗಡವಾಗಿ ಪಾವತಿಸಲು 20 ಕೋಟಿ ರೂ.ಮೊತ್ತದ ಚೆಕ್ಕನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರಕ್ಕೆ ಹಸ್ತಾಂತರಿಸಿದ ನಂತರ ಅರಿವು 0.2 ಹೊಸ ತಂತ್ರಾಂಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, 2017ನೆ ಸಾಲಿನ ವೃತ್ತಿಪರ ಶಿಕ್ಷಣ ಹಾಗೂ ಇನ್ನಿತರ ಶಿಕ್ಷಣದ ಪ್ರವೇಶ ಪರೀಕ್ಷೆಗಳಿಗೆ ಹಾಜರಾಗುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದಿಂದ ಹೊಸ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು. ಈ ತಂತ್ರಾಂಶದ ಬಳಕೆಯಿಂದ ಅರ್ಜಿಯ ಪರಿಶೀಲನಾ ಪ್ರಕ್ರಿಯೆ ಅತ್ಯಂತ ಕ್ಷಿಪ್ರವಾಗಿ ನಡೆಯಲು ಅನುಕೂಲವಾಗಲಿದೆ ಎಂದರು.

ಮೂರು ವರ್ಷಗಳಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು "ಅರಿವು" ಯೋಜನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಅದರಂತೆ, 2014-15ನೆ ಸಾಲಿನಲ್ಲಿ 19,044 ಫಲಾನುಭವಿಗಳಿಗೆ 51.82 ಕೋಟಿ ರೂ., 2015-16 ನೆ ಸಾಲಿನಲ್ಲಿ 24,518 ಫಲಾನುಭವಿಗಳಿಗೆ 69.07 ಕೋಟಿ ರೂ. ಹಾಗೂ 2016-17 ನೆ ಸಾಲಿನಲ್ಲಿ 23,822 ಫಲಾನುಭವಿಗಳಿಗೆ 82.79 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅರಿವು ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ. ಮೀಸಲಿರಿಸಲಾಗಿದೆ ಎಂದು ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಸಚಿವರಾದ ಯು.ಟಿ.ಖಾದರ್, ಬಸವರಾಜ ರಾಯರಡ್ಡಿ, ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಬಿ.ಬಿ.ಮೊಯ್ದಿನ್‌ ಬಾವ, ಕೆಎಂಡಿಸಿ ಅಧ್ಯಕ್ಷ ಎಂ.ಎ.ಗಫೂರ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ನಿಖ್ಖತ್ ತಬಸ್ಸುಮ್ ಆಬ್ರೂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News