"ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ಗರಿಷ್ಠ ದರ 200: ಇನ್ನು ಎರಡು ದಿನಗಳಲ್ಲಿ ಜಾರಿ"

Update: 2017-04-25 15:05 GMT

ಬೆಂಗಳೂರು, ಎ.25: ಇನ್ನು ಎರಡು ದಿನಗಳಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ಟಿಕೆಟ್ ದರವನ್ನು ಗರಿಷ್ಠ 200 ರೂ.ಗಳಿಗೆ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮಂಗಳವಾರ ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಐದು ದಿನಗಳ ಕಾಲ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡಮಿ ಆಯೋಜಿಸಿರುವ ರಾಜ್ಯ-ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಚಲನಚಿತ್ರಗಳ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ಟಿಕೆಟ್ ದರವನ್ನು ಗರಿಷ್ಠ 200ರೂ.ಗಳಿಗೆ ಕಡ್ಡಾಯಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಬಜೆಟ್ ಘೋಷಣೆಯಾಗಿ ಎರಡು ತಿಂಗಳು ಕಳೆದರೂ ಮಲ್ಟಿಪ್ಲೆಕ್ಸ್‌ಗಳಲ್ಲಿ 200 ರೂ.ಗಿಂತಲೂ ಹೆಚ್ಚಿನ ಮೊತ್ತದಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಗರಿಷ್ಠ ದರ ಕಡ್ಡಾಯವನ್ನು ಕಾರ್ಯಗತಗೊಳಿಸಲು ಇನ್ನೆರಡು ದಿನಗಳಲ್ಲಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಕನ್ನಡ ಭಾಷೆ, ಕನ್ನಡ ಚಲನಚಿತ್ರರಂಗ ಸಣ್ಣದೇನಲ್ಲ. ಮನಸ್ಸು ಮಾಡಿದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಯುವ ನಿರ್ದೇಶಕರು ಈ ಸವಾಲನ್ನು ಸ್ವೀಕರಿಸಬೇಕು. ನಮ್ಮಲ್ಲಿಯೂ ಪ್ರತಿಭೆಗಳಿವೆ, ಉತ್ತಮ ಚಿತ್ರಗಳನ್ನು ಮಾಡುವ ಮನಸ್ಥಿತಿಯೂ ಇದೆ. ಇದನ್ನು ಬಳಸಿಕೊಂಡು ಚಿತ್ರೋದ್ಯಮವನ್ನು ಉನ್ನತ ಮಟ್ಟಕ್ಕೇರಿಸುವ ಪ್ರಯತ್ನ ಮಾಡಬೇಕು ಎಂದು ಕರೆಕೊಟ್ಟರು.

ಪ್ರಶಸ್ತಿ ಪಡೆದ ಚಿತ್ರಗಳನ್ನು ಜನಸಾಮಾನ್ಯರು ನೋಡುವುದಿಲ್ಲ ಎನ್ನುವುದಕ್ಕಿಂತ ಅವರಿಗೆ ನೋಡುವ ಭಾಗ್ಯ ಒದಗಿಸಿಕೊಡಬೇಕು. ಆದರ್ಶಗಳು ಮತ್ತು ಮೌಲ್ಯಗಳು ಮುಂದಿನ ತಲೆಮಾರುಗಳಿಗೆ ತಲುಪಲು ಸಿನೆಮಾ ಪರಿಣಾಮಕಾರಿ ಸಾಧನ ಎಂದರು.

ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ಪ್ರಶಸ್ತಿ ವಿಜೇತ ಚಿತ್ರಗಳ ಬಗ್ಗೆ ಜನಸಾಮಾನ್ಯರಿಗೆ ಅನುಮಾನಗಳಿರುತ್ತವೆ. ಇಂತಹ ಉತ್ಸವಗಳ ಮೂಲಕ ಈ ಚಿತ್ರಗಳನ್ನು ಪ್ರದರ್ಶಿಸಿ ಅವರಿಗೆ ಮನದಟ್ಟು ಮಾಡಿಕೊಡಬೇಕು ಎಂದು ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಬಾಹುಬಲಿ ಸಿನೆಮಾ ರಾಜ್ಯದಲ್ಲಿ ಬಿಡುಗಡೆಯಾಗಲು ನಮ್ಮ ವಿರೋಧವಿಲ್ಲ. ಆದರೆ ಕನ್ನಡ ಸಿನೆಮಾಗಳ ಪ್ರದರ್ಶನಕ್ಕೆ ತೊಂದರೆಕೊಟ್ಟರೆ ಹೋರಾಟ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಪೈರಸಿಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಗೃಹಮಂತ್ರಿಗಳಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಜಯಮಾಲಾ, ಅಕಾಡಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್, ನಿರ್ದೇಶಕ ಪಿ. ಶೇಷಾದ್ರಿ, ಕಂಠೀರವ ಸ್ಟುಡಿಯೋದ ಅಧ್ಯಕ್ಷೆ ಅಶ್ವಿನಿ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News