ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಲಭ್ಯ: ತನ್ವೀರ್‌ಸೇಠ್

Update: 2017-04-25 15:13 GMT

ಬೆಂಗಳೂರು, ಎ.25: ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಲಭ್ಯವಾಗಲಿದ್ದು, ಈ ಸಂಬಂಧ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ತಿಳಿಸಿದ್ದಾರೆ.

ಮಂಗಳವಾರ ನಗರದ ಹಸ್ನತ್ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸತತ ಬರಗಾಲದಿಂದಾಗಿ ಮೂರು ಕಾಗದ ಕಾರ್ಖಾನೆಗಳು ಸ್ಥಗಿತಗೊಂಡಿದ್ದವು. ಕೇಂದ್ರ ಸರಕಾರದ ಅಧೀನದಲ್ಲಿರುವ ರಾಷ್ಟ್ರೀಯ ಕಾಗದ ಕಾರ್ಖಾನೆಯೊಂದಿಗೆ ಚರ್ಚೆ ಮಾಡಲಾಗಿದ್ದು, ನಮಗೆ ಪಠ್ಯಪುಸ್ತಕಕ್ಕೆ ಅಗತ್ಯವಿರುವ ಕಾಗದ ಸಿಕ್ಕಿದೆ. ನಿಗದಿತ ಅವಧಿಯಲ್ಲಿ ಮುದ್ರಣಗೊಂಡು, ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಲಿವೆ ಎಂದು ಅವರು ಹೇಳಿದರು.

ಶಿಕ್ಷಕರ ಹುದ್ದೆ ಖಾಲಿ: ಗ್ರಾಮೀಣ ಪ್ರದೇಶದಲ್ಲಿ 14,729 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಹೊಸದಾಗಿ ಆಯ್ಕೆಯಾಗುವವರಿಗೆ ಗ್ರಾಮೀಣ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಣೆಯನ್ನು ಕಡ್ಡಾಯಗೊಳಿಸಲಾಗುವುದು. ವರ್ಗಾವಣೆ ಎಂಬುದು ಸರಕಾರಿ ಸೇವೆಯ ಭಾಗ. 2007ರ ಕಾಯ್ದೆಯಲ್ಲಿ ವರ್ಗಾವಣೆ ಕುರಿತು ಇದ್ದ ಲೋಪಗಳನ್ನು ಗುರುತಿಸಿ, ನಮ್ಮ ಸರಕಾರ ಹೊಸ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಅವರು ತಿಳಿಸಿದರು.

ಆಡಳಿತ ಸುಧಾರಣೆಯ ಹಿನ್ನೆಲೆಯಲ್ಲಿ 10 ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡಿರುವ ಶಿಕ್ಷಕರನ್ನು ಸರದಿ(ರೊಟೇಷನ್)ಆಧಾರದಲ್ಲಿ ವರ್ಗಾವಣೆ ಮಾಡುತ್ತಿ ದ್ದೇವೆ. ಈ ಹಿನ್ನೆಲೆಯಲ್ಲಿ 12,746 ಶಿಕ್ಷಕರನ್ನು ನಗರಗಳಿಂದ ಗ್ರಾಮೀಣ ಪ್ರದೇಶಕ್ಕೆ ವರ್ಗಾವಣೆ ಮಾಡಿದ್ದೇವೆ. ಗ್ರಾಮೀಣಪ್ರದೇಶದಲ್ಲಿ 1.46 ಲಕ್ಷ ಹಾಗೂ ನಗರಪ್ರದೇಶದಲ್ಲಿ 23 ಸಾವಿರ ಶಿಕ್ಷಕರಿದ್ದಾರೆ ಎಂದು ತನ್ವೀರ್‌ಸೇಠ್ ಹೇಳಿದರು.

ಬೆಂಗಳೂರಿನಲ್ಲಿ ಮೌಲಾನ ಅಬ್ದುಲ್ ಕಲಾಮ್ ಆಝಾದ್ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸುವಂತೆ ಬಿಬಿಎಂಪಿಗೆ ಪತ್ರ ಬರೆಯಲಾಗಿದ್ದು, ಬುಧವಾರ ನಡೆಯಲಿರುವ ಸಭೆಯಲ್ಲಿ ಚರ್ಚೆಗೆ ಬರಲಿದೆ. ವಕ್ಫ್ ತರಬೇತಿ ಸಂಸ್ಥೆ ಸ್ಥಾಪನೆಗೆ ಸ್ಥಳದ ಅಗತ್ಯವಿದ್ದು, ಈ ಬಗ್ಗೆಯೂ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು.

ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ 2.50 ಲಕ್ಷ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇದರಿಂದಾಗಿ, ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಟೈಮ್‌ಲೀ ಮೆಡ್ಸ್ ಮೆಡಿಕಲ್‌ನ ಸಹ ಸಂಸ್ಥಾಪಕ ಫೈಝಾನ್ ಅಝೀಝ್, ಹಸ್ನತ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎ.ಹಾಮಿದ್ ರಝಾಕ್ ಸೇಠ್, ಕಾರ್ಯದರ್ಶಿ ಎ.ವಹಾಬ್‌ಖಾನ್, ಉಪಾಧ್ಯಕ್ಷ ಸಯೀದ್ ಮುನವ್ವರ್, ಅಝೀಝ್‌ಖಾದರ್, ಪ್ರಾಂಶುಪಾಲ ಡಾ.ಸುಹೇಲ್ ಇಕ್ಬಾಲ್ ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಈ ವರ್ಷದಿಂದ ಐಎಎಸ್, ಕೆಎಎಸ್, ಐಐಎಂ ಪ್ರವೇಶ ಪರೀಕ್ಷೆಗೆ ಆಯ್ದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಿಹಾರ ಮೂಲದ ರಹ್ಮಾನಿಯಾ ಸಮೂಹದ ‘ಸೂಪರ್‌ಫಾಸ್ಟ್ 30’ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಐಐಎಂ, ಐಐಎಸ್ಸಿ, ಐಐಟಿಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 2 ಲಕ್ಷ ರೂ.ಗಳವರೆಗೆ ನೆರವು ನೀಡಲು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
-ತನ್ವೀರ್‌ಸೇಠ್ ,ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News