ಹುತಾತ್ಮ ಸಿಆರ್‌ಪಿಎಫ್ ಯೋಧರ ಮಕ್ಕಳ ಶಿಕ್ಷಣದ ಹೊಣೆಹೊತ್ತ ಗಂಭೀರ್

Update: 2017-04-28 05:20 GMT

ಹೊಸದಿಲ್ಲಿ, ಎ.28: ಇತ್ತೀಚೆಗೆ ಛತ್ತೀಸ್‌ಗಡದಲ್ಲಿ ಮಾವೋವಾದಿಗಳ ದುಷ್ಕ್ರತ್ಯಕ್ಕೆ ಬಲಿಯಾದ 25 ಸಿಆರ್‌ಪಿಎಫ್ ಯೋಧರ ಮಕ್ಕಳ ಸಂಪೂರ್ಣ ಶಿಕ್ಷಣ ವೆಚ್ಚವನ್ನು ತನ್ನ ಚಾರಿಟೇಬಲ್ ಟ್ರಸ್ಟ್‌ನ ಮುಖಾಂತರ ಭರಿಸುವುದಾಗಿ ಕೋಲ್ಕತಾ ನೈಟ್‌ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ.

 ‘‘ಈ ಘಟನೆಯಿಂದ ನನಗೆ ತುಂಬಾ ಆಘಾತವಾಗಿದೆ. ಬುಧವಾರ ಬೆಳಗ್ಗೆ ಎರಡು ದಿನಪತ್ರಿಕೆಗಳಲ್ಲಿ ಮೃತ ಸಿಆರ್‌ಪಿಎಫ್ ಅಧಿಕಾರಿಗಳ ಹೆಣ್ಣು ಮಕ್ಕಳು ರೋದಿಸುತ್ತಿರುವ ಚಿತ್ರಗಳನ್ನು ನೋಡಿ ತುಂಬಾ ನೋವಾಗಿದೆ. ಒಂದು ಪತ್ರಿಕೆಯಲ್ಲ್ಲಿ ಹುತಾತ್ಮ ತಂದೆಗೆ ಮಕ್ಕಳು ಸೆಲ್ಯೂಟ್ ಹೊಡೆಯುವ ದೃಶ್ಯವಿದ್ದರೆ, ಮತ್ತೊಂದು ಚಿತ್ರದಲ್ಲಿ ಸಂತ್ರಸ್ತ ಮಹಿಳೆಗೆ ಸಂಬಂಧಿಕರು ಸಮಾಧಾನಪಡಿಸುವ ಚಿತ್ರವಿತ್ತು’’ಎಂದು ಆಂಗ್ಲ ಪತ್ರಿಕೆಗೆ ಬರೆದ ಅಂಕಣಬರಹದಲ್ಲಿ ಗಂಭೀರ್ ತಿಳಿಸಿದ್ದಾರೆ.

ಮೃತಪಟ್ಟ ಸಿಆರ್‌ಪಿಎಫ್ ಯೋಧರ ಗೌರವಾರ್ಥ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರರು ಬುಧವಾರ ನಡೆದಿದ್ದ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡದ ವಿರುದ್ಧ ಐಪಿಎಲ್ ಪಂದ್ಯದ ವೇಳೆ ಕೈಗೆ ಕಪ್ಪುಪಟ್ಟಿ ಧರಿಸಿ ಆಡಿದ್ದರು.

‘‘ಹುತಾತ್ಮರಾದ ಎಲ್ಲ ಸಿಆರ್‌ಪಿಎಫ್ ಯೋಧರ ಮಕ್ಕಳ ಶಿಕ್ಷಣದ ವೆಚ್ಚವನ್ನು ಗೌತಮ್ ಗಂಭೀರ್ ಫೌಂಡೇಶನ್ ಭರಿಸಲಿದೆ. ನನ್ನ ತಂಡ ಈ ನಿಟ್ಟಿನಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ಏನೆಲ್ಲಾ ಬೆಳವಣಿಗೆಯಾಗಿದೆ ಎಂದು ನಿಮ್ಮಿಂದಿಗೆ ಸದಾ ಹಂಚಿಕೊಳ್ಳುವೆ’’ ಎಂದು ಗಂಭೀರ್ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News