ದಾರಿ ತಪ್ಪಿಸುವ ಜಾಹೀರಾತುಗಳಿಗೆ ರೂಪದರ್ಶಿ, ಸೆಲೆಬ್ರಿಟಿಗಳು ಕೂಡಾ ಹೊಣೆಗಾರರು

Update: 2024-05-07 16:39 GMT

ಸುಪ್ರೀಂಕೋರ್ಟ್

ಹೊಸದಿಲ್ಲಿ :ದಾರಿ ತಪ್ಪಿಸುವ ಜಾಹೀರಾತುಗಳ ಬಗ್ಗೆ ಕಠಿಣ ನಿಲುವನ್ನು ತಾಳಿರುವ ಸುಪ್ರೀಂಕೋರ್ಟ್, ಯಾವುದೇ ಉತ್ಪನ್ನ ಅಥವಾ ಸೇವೆಯ ವಾಣಿಜ್ಯ ಜಾಹೀರಾತು ಮೋಸದಿಂದ ಕೂಡಿರುವುದು ಪತ್ತೆಯಾದಲ್ಲಿ ಅವುಗಳಲ್ಲಿ ಕಾಣಿಸಿಕೊಂಡಿರುವ ಸೆಲೆಬ್ರಿಟಿಗಳಾಗಲಿ ಹಾಗೂ ಸಾಮಾಜಿಕ ಮಾಧ್ಯಮಗಳ ಇನ್‌ಫ್ಲುಯೆನ್ಸರ್‌ಗಳು ಕೂಡಾ ಸಮಾನವಾಗಿ ಬಾಧ್ಯಸ್ಥರಾಗಿರುತ್ತಾರೆ ಎಂದು ಹೇಳಿದೆ.

ಪತಂಜಲಿ ಆಯುರ್ವೇದದ ದಾರಿ ತಪ್ಪಿಸುವ ಜಾಹೀರಾತುಗಳ ಪ್ರಕರಣದ ಆಲಿಕೆ ನಡೆಸಿದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠವು, ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಪ್ರಸಾರಕರು, ಈ ವಾಣಿಜ್ಯ ಜಾಹೀರಾತುಗಳು ಪ್ರಸಕ್ತವಾದ ನಿಯಮಗಳನ್ನು ಅನುಸರಿಸಿವೆ ಎಂಬ ಸ್ವಯಂಘೋಷಣೆಯ ಫಾರಂ ಅನ್ನು ಸಲ್ಲಿಸಬೇಕಾಗಿದೆ ಎಂದು ತಿಳಿಸಿತು.

ಪತಂಜಲಿ ಪ್ರಕರಣದ ಆಲಿಕೆಯನ್ನು ಮಂಗಳವಾರ ಮುಂದುವರಿಸಿದ ನ್ಯಾಯಮೂರ್ತಿಗಳಾದ ಹಿಮಾ ಕೋಹ್ಲಿ ಹಾಗೂ ಎ. ಆಮಾನುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು 2022ರ ದಾರಿತಪ್ಪಿಸುವ ಜಾಹೀರಾತುಗಳು ಹಾಗೂ ಪ್ರಚಾರಗಳ ತಡೆಗಾಗಿನ ಮಾರ್ಗದರ್ಶಿ ಸೂತ್ರಗಳನ್ನು ಪ್ರಸ್ತಾವಿಸಿತು.

ಓರ್ವ ವ್ಯಕ್ತಿಗೆ ತಾನು ಅನುಮೋದಿಸುತ್ತಿರುವ ಯಾವುದೇ ಉತ್ಪನ್ನ ಅಥವಾ ಸೇವೆ ಬಗ್ಗೆ ಆತನಿಗೆ ಸಾಕಷ್ಟು ಮಾಹಿತಿ ಅಥವಾ ಅನುಭವವಿರಬೇಕೆಂದು ಮಾರ್ಗದರ್ಶಿ ಸಂಖ್ಯೆ 13 ಪ್ರತಿಪಾದಿಸುತ್ತದೆ.

ಉತ್ಪನ್ನಗಳು ಹಾಗೂ ಸೇವೆಗಳ ಜಾಹೀರಾತುಗಳು ದಾರಿತಪ್ಪಿಸುತ್ತಿರುವುದು ಗ್ರಾಹಕರಿಗೆ ಮನವರಿಕೆಯಾದಲ್ಲಿ ಆವರು ಆ ಬಗ್ಗೆ ದೂರು ನೀಡುವುದನ್ನು ಉತ್ತೇಜಿಸಬೇಕೆಂದು ದ್ವಿಸದಸ್ಯ ನ್ಯಾಯಪೀಠ ಸಲಹೆ ನೀಡಿತು.

ಪತಂಜಲಿಯ ಜಾಹೀರಾತು ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿರುವಾಗ ಆ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಕ್ಕಾಗಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಧ್ಯಕ್ಷ ಆರ್. ಅಶೋಕನ್ ಅವರಿಗೆ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿದೆ. ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಶೋಕನ್ ಅವರು ಐಎಂಎ ಹಾಗೂ ಖಾಸಗಿ ವೈದ್ಯರುಗಳ ನಡವಳಿಕೆಯನ್ನು ಸುಪ್ರೀಂಕೋರ್ಟ್‌ ಟೀಕಿಸಿದ್ದನ್ನು ಖಂಡಿಸಿದ್ದರು. ಇದರಿಂದಾಗಿ ವೈದ್ಯರುಗಳ ನೈತಿಕತೆಗೆ ಹಾನಿಯಾಗುತ್ತದೆಯೆಂದು ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News