​ರಾಷ್ಟ್ರಮಟ್ಟದ ಸಾವಯವ -ಸಿರಿಧಾನ್ಯ ಮೇಳಕ್ಕೆ ಚಾಲನೆ: ಖಾದ್ಯ ಚಪ್ಪರಿಸಿದ ಜನತೆ

Update: 2017-04-28 18:35 GMT

ಬೆಂಗಳೂರು, ಎ. 28: ಒಂದು ದಿಕ್ಕಿನಲ್ಲಿ ಸಾವಯವ ಮತ್ತು ಸಿರಿ ಧಾನ್ಯಗಳನ್ನು ಖರೀದಿಸುವ ಭರಾಟೆಯಲ್ಲಿದ್ದ ಜನತೆ. ಮತ್ತೊಂದೆಡೆ ಸಿರಿಧಾನ್ಯದಿಂದ ಮಾಡಿದ್ದ ಖಾದ್ಯಗಳನ್ನು ತಿಂದು ಹಿರಿ ಹಿರಿ ಹಿಗ್ಗುತ್ತಿದ್ದ ಯುವಕರ ದಂಡು. ಇನ್ನೊಂದೆಡೆ ಬಗೆ ಬಗೆಯ ದೋಸೆ, ರೋಟಿ, ಚಕ್ಕುಲಿ, ಒಡೆ, ಹೋಳಿಗೆಯನ್ನು ಸವಿದು ಬಾಯಿ ಚಪ್ಪರಿಸುತ್ತಿದ್ದ ಜನ.

ಈ ಚಿತ್ರಣ ಕಂಡಿದ್ದು ನಗರದ ಅರಮನೆ ಮೈದಾನದಲ್ಲಿ. ಇಂದು ಕೃಷಿ ಇಲಾಖೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಸಾವಯವ -ಸಿರಿಧಾನ್ಯ ರಾಷ್ಟ್ರೀಯ ವಾಣಿಜ್ಯ ಮೇಳದ ಮೊದಲನೆಯ ದಿನದಲ್ಲಿ.

ಮೇಳದಲ್ಲಿ ಸಾಮೆ, ರಾಗಿ, ಬುರಗು, ನವಣೆ ಸೇರಿದಂತೆ ಇತರೆ ಧಾನ್ಯಗಳಿಂದ ತಯಾರಿಸಿದ ಪದಾರ್ಥಗಳು, ಸಾವಯವ ಟೀ, ಕಾಫಿ, ವಿವಿಧ ತಂಪು ಪೇಯಗಳು, ಸಾವಯವ ಸಿರಿಧಾನ್ಯಗಳಿಂದ ಮಾಡಿದ ಚಾಟ್ಸ್, ಚಿಪ್ಸ್, ಬೇಕರಿ ಪದಾರ್ಥಗಳು ನೋಡುಗರ ಬಾಯಲ್ಲಿ ನೀರೂರಿಸುತ್ತಿದ್ದವು. ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಸಾವಯವ ವಸ್ತ್ರಗಳನ್ನು ಬಾಯಿ ಮೇಲೆ ಬೆರಳಿಟ್ಟು ಅಚ್ಚರಿಯಿಂದ ನೋಡುವ ದೃಶ್ಯ ಸಾಮಾನ್ಯವಾಗಿತ್ತು.

 ಮೇಳದಲ್ಲಿ 200ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ಪ್ರತಿ ಮಳಿಗೆಯಲ್ಲಿ ನಿರೀಕ್ಷ್ಷೆಗೂ ಮೀರಿ ಜನರು ತುಂಬಿ ತುಳುಕುತ್ತಿದ್ದರು. ಒಟ್ಟಾರೆ ಮೇಳದಲ್ಲಿ ಅಗತ್ಯ ಸಾವಯವ ಮತ್ತು ಸಿರಿಧಾನ್ಯಗಳ ಖರೀದಿಯ ಭರಾಟೆ ಜೋರಾಗಿತ್ತು. ಸಾವಯವ ಮತ್ತು ಸಿರಿಧಾನ್ಯಗಳ ರೆಡಿಮೇಡ್ ಫುಡ್‌ಗಳಿಗೂ ಮೇಳದಲ್ಲಿ ಬಹು ಬೇಡಿಕೆ ಬಂದಿತ್ತು.

ಮೇಳದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಬೇಸಾಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿತ್ತು. ರೈತರ ಮತ್ತು ಸಗಟು ವ್ಯಾಪಾರಸ್ಥರ ನಡುವೆ ಸಂಪರ್ಕ ಕಲ್ಪಿಸಲು ಸಂಪರ್ಕ ಡೆಸ್ಕ್‌ಗಳನ್ನು ತೆರೆಯಲಾಗಿತ್ತು. ಮೇಳದ ಬಲ ಬದಿಯಲ್ಲಿ ರೈತರಿಗಾಗಿ ಸಾವಯವ ಮತ್ತು ಸಿರಿಧಾನ್ಯಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

 ರಾಷ್ಟ್ರಮಟ್ಟದ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಪಾಲ್ಗೊಂಡಿದ್ದರು. ತಮಗೆ ಅಗತ್ಯವೆನಿಸಿದ್ದ ಧಾನ್ಯಗಳ ಬೇಸಾಯಕ್ಕೆ ಸಂಬಂಧಿಸಿದಂತೆ ಪೂರಕವಾದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಓಟ್ಟಾರೆ ಮೇಳಕ್ಕೆ ನೀರಿಕ್ಷೆಗೂ ಮೀರಿ ಜನ ಸಾಗರ ಹರಿದು ಬಂದಿದ್ದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News