ಓಲಾ ಚಾಲಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಬೆಂಗಳೂರು,ಮೇ.2: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಓಲಾ ಚಾಲಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಓಲಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೃತ್ತಿಪರ ಗಾಯಕಿಯೊಬ್ಬರಿಗೆ ಶುಕ್ರವಾರ ರಾತ್ರಿ 2ರ ಸುಮಾರಿಗೆ ಚಾಲಕ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆಪಾದಿಸಲಾಗಿದೆ. ಮಹಿಳೆ ಈ ಸಂಬಂಧ ಬೊಮ್ಮನಹಳ್ಳಿ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಿದ್ದಾರೆ.
ನಕ್ಷೆಯಲ್ಲಿ ತೋರಿಸಿದ ಮಾರ್ಗನಕ್ಷೆಯನ್ನು ಬದಲಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆಪಾದಿಸಲಾಗಿದೆ. ಚಾಲಕನ ಹೆಸರನ್ನು ರವಿ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮುಖ್ಯರಸ್ತೆಯಿಂದ ಬೇರೆಡೆಗೆ ಕಾರನ್ನು ಹೊರಳಿಸಿದ ತಕ್ಷಣ ಅನುಮಾನದಿಂದ ಮಹಿಳೆ ಚೀರಿಕೊಂಡರು. ಆದರೆ ನಿರ್ಜನ ಪ್ರದೇಶವಾದ್ದರಿಂದ ಪ್ರಯೋಜನವಾಗಲಿಲ್ಲ ಎಂದು ಮಹಿಳೆ ವಿವರಿಸಿದ್ದಾರೆ.
ಕರೋಕೆ ನೈಟ್ ಎಂಬ ಕಾರ್ಯಕ್ರಮ ಮುಗಿಸಿ ಕೋರಮಂಗಲದಿಂದ ಹೊರಟಿದ್ದ ಮಹಿಳೆ ಐದು ಕಿಲೋಮೀಟರ್ ದೂರದ ತಮ್ಮ ನಿವಾಸಕ್ಕಾಗಿ ಓಲಾ ಕಾರು ಕಾಯ್ದಿರಿಸಿದ್ದರು. ಬೇಗೂರಿನಲ್ಲಿದ್ದ ಮನೆಗೆ ಹೋಗುತ್ತಿದ್ದಾಗ, ಚಾಲಕ ಬೇಗೂರು ರಸ್ತೆಯ ಕಬಾಬ್ ಝೋನ್‌ನ ಎದುರುಗಡೆ ಕಾರು ನಿಲ್ಲಿಸಿದ. ನಂತರ ನಿರ್ಜನ ಪ್ರದೇಶಕ್ಕೆ ಕಾರನ್ನು ಒಯ್ದು ಒಂದು ಕ್ಷಣ ಹಾಗೆಯೇ ನಿಂತು ದಿಢೀರನೇ ಮಹಿಳೆಯನ್ನು ಬರಸೆಳೆದುಕೊಂಡ ಎಂದು ಹೇಳಲಾಗಿದೆ.
ತಕ್ಷಣ ಆತನನ್ನು ಪಕ್ಕಕ್ಕೆ ತಳ್ಳಿ ಕಾರಿನಿಂದ ಹೊರಬಂದರೂ ಹಿಂಬಾಲಿಸಿಕೊಂಡು ಬಂದ ಎಂದು ಸಂತ್ರಸ್ತ ಮಹಿಳೆ ದೂರಿದ್ದಾರೆ. ತಕ್ಷಣ ಅಲ್ಲೊಂದು ಆಸ್ಪತ್ರೆ ಕಂಡಿತು. ಭದ್ರತಾ ಸಿಬ್ಬಂದಿಗೆ ಮನವಿ ಮಾಡಿಕೊಂಡು ಒಳಗೆ ಹೋದೆ. ಸ್ನೇಹಿತೆಯರು ಬರುವವರೆಗೂ ಅಲ್ಲೇ ಇದ್ದೆ. ಆಸ್ಪತ್ರೆ ಆವರಣಕ್ಕೆ ನಾನು ಹೋಗುತ್ತಿದ್ದಂತೆ ಚಾಲಕ ತಪ್ಪಿಸಿಕೊಂಡು ಹೋದ ಎಂದು ವಿವರಿಸಿದ್ದಾರೆ.