ಗಂಭೀರ ಕಾಯಿಲೆಗೆ ಉಚಿತ ಚಿಕಿತ್ಸೆ: 4 ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಂತನೆ; ಸಿದ್ದರಾಮಯ್ಯ
ಬೆಂಗಳೂರು, ಮೇ 2: ಗಂಭೀರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ನಾಲ್ಕು ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ಆವರಣದಲ್ಲಿ ಇನ್‌ಫೋಸಿಸ್ ಫೌಂಡೇಷನ್ ದೇಣಿಗೆಯಡಿ ನಿರ್ಮಿಸಲಿರುವ ಧರ್ಮಶಾಲೆಯ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಅವರು, ಗಂಭೀರ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನಾಲ್ಕು ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಹಾಗೂ ರಾಜ್ಯ ಎಲ್ಲ ಜಿಲ್ಲೆಗಳಲ್ಲೂ ಮೆಡಿಕಲ್ ಕಾಲೇಜು ಸ್ಥಾಪಿಸಲು ಉದ್ದೇಶಿಸಿದ್ದು, ಪ್ರಸಕ್ತ ವರ್ಷ ಆರು ಕಾಲೇಜುಗಳು ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಗ್ರಾಮಾಂತರ ಪ್ರದೇಶದಲ್ಲಿಯೇ ಹೆಚ್ಚಿನ ರೋಗಿಗಳು ಕಂಡು ಬರುತ್ತಿದ್ದು, ಇವರ ಚಿಕಿತ್ಸೆಗೆ ವೈದ್ಯರು ಮುಂದಾಗಬೇಕು ಎಂದ ಅವರು, ಸರಕಾರಿ ವೈದ್ಯ ಸೀಟುಗಳಿಗೆ ಮುಗಿಬೀಳುವ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರ ಪ್ರತಿವರ್ಷ ಆರೋಗ್ಯ ಕ್ಷೇತ್ರಕ್ಕೆ 7,500 ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೂ ರಾಜ್ಯದ ಎಲ್ಲ ಜನತೆಗೂ ಸಂಪೂರ್ಣವಾಗಿ ಆರೋಗ್ಯವನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿರುವ ಹಣವಂತರು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸರಕಾರದ ಜೊತೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.
ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಸರಕಾರಿ ಕೋಟಾದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೀಟುಗಳನ್ನು ಹಂಚುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸರಕಾರಿ ವೈದ್ಯಕೀಯ ಮೆಡಿಕಲ್ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭ ಉದ್ದೇಶಿಸಿ ಮಾತನಾಡಿದ ಸುಧಾಮೂರ್ತಿ, "ಮಾತನಾಡುವುದಕ್ಕಿಂತ ಹೆಚ್ಚು ಕೆಲಸ ಮಾಡಿ ತೋರಿಸಬೇಕು. ನಾನು ಇಂತದ್ದೊಂದು ಕೆಲಸಕ್ಕೆ ಅವಕಾಶ ಮಾಡಿಕೊಟ್ಟ ಸರಕಾರಕ್ಕೆ ಋಣಿಯಾಗಿದ್ದೇನೆ. ಸರಕಾರದ ಆಸ್ಪತ್ರೆಗೆ ಏನಾದರೂ ಸೌಲಭ್ಯ ಒದಗಿಸಬೇಕೆಂಬುದು ನನ್ನ ಬಯಕೆ. ವಿದೇಶಗಳಿಗಿಂತಲೂ ನಮ್ಮ ದೇಶದ ವೈದ್ಯಕೀಯ ವ್ಯವಸ್ಥೆ ಉತ್ತಮವಾಗಿದೆ" ಎಂದರು.
ಕಾರ್ಯಕ್ರಮದಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ರಕ್ತ ನಿಧಿ ಘಟಕ ಹಾಗೂ ಲೀನಿಯರ್ ಆಕ್ಸಲರೇಟರ್ ಯಂತ್ರವನ್ನು ಲೋಕಾರ್ಪಣೆ ಮಾಡಲಾಯಿತು. ಈ ವೇಳೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಅಭಿವೃದ್ಧಿಗೆ ಧನ ಸಹಾಯ ಮಾಡಿದ ದಾನಿಗಳನ್ನು ಮುಖ್ಯಮಂತ್ರಿ ಸನ್ಮಾನಿಸಿದರು. ಮೇಯರ್ ಪದ್ಮಾವತಿ, ವೈದ್ಯಕೀಯ ಅಪರ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ, ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ ಮತ್ತಿತರರಿದ್ದರು.
ಇದು ಸರಕಾರಿ ಆಸ್ಪತ್ರೆಯ ಋಣ
ನನ್ನ ಮೊದಲ ಹೆರಿಗೆ 25 ಪೈಸೆ ಹಾಗೂ ಎರಡನೆ ಹೆರಿಗೆಯನ್ನು 15 ರೂ.ನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಮಾಡಿಸಿದ್ದೇನೆ. ನನ್ನ ತಂದೆ ಹುಬ್ಬಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ನನ್ನ ಬಾಲ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿಯೇ ನಡೆದಿದೆ. ಇವೆಲ್ಲಾ ಋಣ ನನ್ನ ಮೇಲೆ ಇದೆ. ನನಗೆ ಈಗಲೂ ಸರಕಾರಿ ಆಸ್ಪತ್ರೆಯ ಮೇಲೆ ವಿಶ್ವಾಸ, ಪ್ರೀತಿ ಎರಡೂ ಇದೆ. ಈ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಯ ಅಭಿವೃದ್ಧಿಗೆ ನನ್ನಲ್ಲಾದ ಸಹಾಯವನ್ನು ಮಾಡುತ್ತಿದ್ದೇನೆ. ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನಿಲ್ಲ.
-ಸುಧಾ ಮೂರ್ತಿ, ಅಧ್ಯಕ್ಷೆ, ಇನ್‌ಫೋಸಿಸ್ ಫೌಂಡೇಷನ್
ಇನ್‌ಫೋಸಿಸ್ ಫೌಂಡೇಷನ್‌ನ ಕೊಡುಗೆಗಳು
-60 ಕೋಟಿ ರೂ. ವೆಚ್ಚದಲ್ಲಿ 1,200 ಬಡ ರೋಗಿಗಳು ತಂಗುವಂತಹ ಧರ್ಮಶಾಲೆ ಕಿದ್ವಾಯಿ ಆವರಣದಲ್ಲಿ ನಿರ್ಮಾಣ.
-ಲಿವರ್ ಟ್ರಾನ್ಸ್‌ಪ್ಲಾಂಟ್ ಇನ್‌ಸ್ಟಿಟ್ಯೂಟ್ ಕಟ್ಟಡ ನಿರ್ಮಾಣಕ್ಕೆ 75 ಕೋಟಿ ರೂ.
-6 ಕೋಟಿ ರೂ.ವೆಚ್ಚದಲ್ಲಿ ಕಲ್ಬುರ್ಗಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಆವರಣದಲ್ಲಿ 80 ಹಾಸಿಗೆಗಳುಳ್ಳ ಧರ್ಮಶಾಲೆ ನಿರ್ಮಾಣ.