ಜೈಲುಗಳಲ್ಲಿ ಬುಡಕಟ್ಟು ಬಾಲಕಿಯರಿಗೆ ಚಿತ್ರಹಿಂಸೆ: ಫೇಸ್‌ಬುಕ್‌ನಲ್ಲಿ ಪೊಲೀಸ್ ಅಧಿಕಾರಿಣಿಯ ಆಕ್ರೋಶ

Update: 2017-05-02 16:32 GMT

ರಾಯ್‌ಪುರ,ಮೇ 2: ಚತ್ತೀಸ್‌ಗಢದಲ್ಲಿ ಬುಡಕಟ್ಟು ಜನರ ಮೇಲೆ ದೌರ್ಜನ್ಯಕ್ಕೆ ಅನುಮತಿ ನೀಡುವಂತಹ ಆಡಳಿತ ವ್ಯವಸ್ಥೆಯಿದೆಯೆಂದು ರಾಜ್ಯದ ಮಹಿಳಾ ಅಧಿಕಾರಿಯೊಬ್ಬರು ಫೇಸ್‌ಬುಕ್‌ನಲ್ಲಿ ಆರೋಪಿಸುವ ಮೂಲಕ ರಾಜ್ಯ ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 ರಾಯ್‌ಪುರ ಸೆಂಟ್ರಲ್ ಜೈಲ್‌ನ ಉಪ ಜೈಲರ್ ವರ್ಷಾ ಡೊಂಗ್ರೆ ಹಿಂದಿಯಲ್ಲಿ ಬರೆದಿರುವ ಈ ಫೇಸ್‌ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ‘‘ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ದೌರ್ಜನ್ಯನಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಿಬ್ಬಂದಿಗಳು 14 ಹಾಗೂ 16 ವರ್ಷದ ಬಾಲಕಿಯರನ್ನು ವಿವಸ್ತ್ರಗೊಳಿಸಿ,ದೌರ್ಜನ್ಯವೆಸಗುತ್ತಾರೆ. ಅವರ ಕೈಗಳು ಹಾಗೂ ಸ್ತನಗಳಿಗೆ ಇಲೆಕ್ಟ್ರಿಕ್‌ಶಾಕ್‌ಗಳನ್ನು ನೀಡಲಾಗುತ್ತದೆ. ಅದರ ಗುರುತುಗಳನ್ನು ನಾನು ಕಂಡಿದ್ದೇನೆ. ಅದು ಅತ್ಯಂತ ಭಯಾನಕವಾಗಿದೆ. ಅಪ್ರಾಪ್ತ ವಯಸ್ಕರ ಮೇಲೆ ಯಾಕೆ ಮೂರನೆ ದರ್ಜೆಯ ಹಿಂಸೆ ನೀಡುವ ಅಗತ್ಯವಾದರೂ ಏನಿದೆ?. ಅವರ ಚಿಕಿತ್ಸೆ ನೀಡುವಂತೆ ನಾನು ಸೂಚನೆ ನೀಡಿದ್ದೇನೆ’’ ಎಂದು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.

 ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಯಾಕೆಂದರೆ ಬಸ್ತಾರ್‌ನಲ್ಲಿ ನಡೆಯುತ್ತಿರುವ ‘ಯುದ್ಧ’ದಲ್ಲಿ ಎರಡೂ ಕಡೆಗಳಲ್ಲಿ ಸಾಯುತ್ತಿರುವವರು ನಮ್ಮವರೇ ಆಗಿದ್ದಾರೆ. ಬಸ್ತಾರ್‌ನಲ್ಲಿ ಬಂಡವಾಳ ಶಾಹಿ ವ್ಯವಸ್ಥೆಯನ್ನು ಬಲವಂತವಾಗಿ ಹೇರಲಾಗುತ್ತಿದೆ. ಬುಡಕಟ್ಟು ಜನರನ್ನು ಅವರ ನೆಲದಿಂದ ಹೊರದಬ್ಬಲಾಗುತ್ತಿದೆ. ಅವರ ಹಳ್ಳಿಗಳನ್ನು ಸುಟ್ಟುಹಾಕಲಾಗುತ್ತಿದೆ ಮತ್ತು ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತಿದೆ. ಇದೆಲ್ಲಾ ಜಮೀನುಗಳನ್ನು ಹಾಗೂ ಕಾಡನ್ನು ಕಬಳಿಸುವ ಹುನ್ನಾರ ಇದಾಗಿದೆಯೇ ಹೊರತು ನಕ್ಸಲ್‌ವಾದವನ್ನು ಕೊನೆಗೊಳಿಸುವ ಉದ್ದೇಶಿದಂದಲ್ಲ ಎಂದ ಅವರು ತಿಳಿಸಿದ್ದಾರೆ.

  ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರನ್ನು ಮಾವೊವಾದಿಗಳು ಹತ್ಯೆಗೈದ ಘಟನೆ ನಡೆದ ಕೆಲವು ದಿನಗಳ ಬಳಿಕ ವರ್ಷಾ ಪೇಸ್‌ಬುಕ್‌ನಲ್ಲಿ ತನ್ನ ಈ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಜೈಲುಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಚಿತ್ರಹಿಂಸೆ ನೀಡಲಾಗುತ್ತಿದೆಯೆಂಬ ಆಕೆಯ ಆರೋಪಗಳಿಗೆ ಸಂಬಂಧಿಸಿ ಜೈಲು ಇಲಾಖೆಯು ತನಿಖೆಗೆ ಆದೇಶಿಸಿದೆ.

 ಮಾನವಹಕ್ಕು ಕಾರ್ಯಕರ್ತರು ಅಥವಾ ಪತ್ರಕರ್ತರು ಸತ್ಯವನ್ನು ಹೇಳಿದಲ್ಲಿ ಅವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಒಂದು ವೇಳೆ ಬುಡಕಟ್ಟು ಜನರ ಜಮೀನುಗಳಲ್ಲಿ ಎಲ್ಲವೂ ಚೆನ್ನಾಗಿದ್ದರೆ ಸರಕಾರವು ಯಾಕೆ ಇಷ್ಟೊಂದು ಹೆದರುತ್ತಿದೆ ಹಾಗೂ ಅಲ್ಲಿ ಯಾಕೆ ಜನರಿಗೆ ಹೋಗಲು ಅನುಮತಿ ನೀಡಲಾಗುತ್ತಿಲ್ಲ ಎಂದವರು ಪ್ರಶ್ನಿಸಿದ್ದಾರೆ.

 ಇನ್ನೋರ್ವ ನಾಗರಿಕನಿಗೆ ಕಿರುಕುಳ ಅಥವಾ ಚಿತ್ರಹಿಂಸೆ ನೀಡಲು ಸಂವಿಧಾನವು ಅನುಮತಿ ನೀಡುವುದಿಲ್ಲವೆಂದು ಹೇಳಿರುವ ವರ್ಷಾ ಅವರು ನಿರ್ದಿಷ್ಟ ಮಾದರಿಯ ಅಭಿವೃದ್ಧಿಯನ್ನು ಆದಿವಾಸಿಗಳ ಮೇಲೆ ಹೇರಲು ಸಾಧ್ಯವಿಲ್ಲ ಎಂದಿದ್ದಾರೆ. ರೈತರು ಹಾಗೂ ಸೈನಿಕರು ಸಹೋದರರು, ಅವರು ಒಬ್ಬರನ್ನೊಬ್ಬರು ಕೊಲ್ಲಬಾರದು’’ ಎಂದು ಹೇಳಿದ್ದಾರೆ.

 ಪ್ರಾಮಾಣಿಕ ಅಧಿಕಾರಿಯೆಂದೇ ಹೆಸರಾದ ಢೋಂಗ್ರೆ 2007ರಲ್ಲಿ ಲೋಕಸೇವಾ ಆಯೋಗದ ಹಗರಣಕ್ಕೆ ಸಂಬಂಧಿಸಿ ಚತ್ತೀಸ್‌ಗಢ ನ್ಯಾಯಾಲಯದ ಮೆಟ್ಟಲೇರಿದ್ದರು. ಮಾಹಿತಿ ಹಕ್ಕು ಕಾಯ್ದೆಯಡಿ ಆಕೆ ಸಲ್ಲಿಸಿದ ಅರ್ಜಿಯನ್ನು ಆಧರಿಸಿ, ಅವ್ಯವಹಾರ ಹಾಗೂ ಭ್ರಷ್ಟಾಚಾರದ ಆರೋಪ ಎದುರಿಸಿದ ಉನ್ನತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.

 ತನ್ನ ಫೇಸ್‌ಬುಕ್ ಲೇಖನವು ವಿವಾದವನ್ನು ಸೃಷ್ಟಿಸಿದ ಹಿನ್ನೆಲೆಯಲ್ಲಿ ವರ್ಷಾ ಅದನ್ನು ತೆಗೆದುಹಾಕಿದ್ದಾರೆ. ಆದಾಗ್ಯೂ, ಈ ಬಗ್ಗೆ ಹೇಳಿಕೆ ನೀಡಿರುವ ಅವರು ಅಭಿವ್ಯಕ್ತಿ ಸ್ವಾತಂತ್ರದ ತನ್ನ ಹಕ್ಕನ್ನು ವ್ಯಕ್ತಪಡಿಸಿರುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News