×
Ad

ಆದೇಶ ಪಾಲಿಸದ ಕಾಖಾರ್ನೆಗಳ ವಿರುದ್ಧ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-05-03 18:00 IST

ಬೆಂಗಳೂರು, ಮೇ 3: ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮತ್ತು ನಿವೃತ್ತಿ ವಯಸ್ಸಿನ ಹೆಚ್ಚಳ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು. ಈ ಆದೇಶಗಳನ್ನು ಪಾಲಿಸದ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್(ಐಎನ್‌ಟಿಯುಸಿ) ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು ಸಂಘಟನೆಯ 70ನೆ ಸಂಸ್ಥಾಪನ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಖಾಸಗಿ ಮತ್ತು ಸರಕಾರಿ ವಲಯಗಳ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ಕನಿಷ್ಠ ವೇತನವನ್ನು 9,100ದಿದ 14,040 ರೂ.ಗಳಿಗೆ ಮತ್ತು ನಿವೃತ್ತಿ ವಯಸ್ಸನ್ನು 58ರಿಂದ 60 ವರ್ಷಕ್ಕೆ ಹೆಚ್ಚಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈ ಭರವಸೆಯಂತೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು. ಈ ಆದೇಶವನ್ನು ಪಾಲಿಸದ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದರಲ್ಲಿ ಯಾವುದೇ ಸಂಶಯಬೇಡ ಎಂದು ಸ್ಪಷ್ಟಪಡಿಸಿದರು.

ಖಾಸಗಿ ವಲಯದ ಉದ್ದಿಮೆ ಮತ್ತು ಕಾರ್ಖಾನೆಗಳಲ್ಲಿನ ‘ಸಿ ಮತ್ತು ಡಿ’ ದರ್ಜೆಯ ಉದ್ಯೋಗದಲ್ಲಿ ಶೇ.100ರಷ್ಟು ಕನ್ನಡಿಗರಿಗೆ ಆದ್ಯತೆ ನೀಡಬೇಕು. ‘ಎ ಮತ್ತು ಬಿ’ ದರ್ಜೆಯ ಉದ್ಯೋಗಗಳಿಗೆ ಅರ್ಹತೆಯಿರುವ ಸ್ಥಳೀಯರನ್ನೇ ಪರಿಗಣಿಸಬೇಕು. ಈ ಕುರಿತು ಕಾರ್ಖಾನೆಗಳಿಗೆ ನೀಡುವ ಪರವಾನಿಗೆಯಲ್ಲಿ ನಮೂದು ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಹೊಸ ಐಟಿಐ ಸಂಸ್ಥೆಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈಗಿರುವ ಐಟಿಐಗಳನ್ನು ಉನ್ನತೀಕರಣಗೊಳಿಸಲಾಗುವುದು. ಕೌಶಲ್ಯ ಅಭಿವೃದ್ಧಿ ನಿಗಮದಡಿ ಈ ವರ್ಷದಲ್ಲಿ ಐದು ಲಕ್ಷ ಮಂದಿಗೆ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡುವ ಗುರಿಯಿದೆ ಎಂದರು.

ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರಕಾರ ಬದ್ಧವಾಗಿದೆ. ಕರ್ನಾಟಕದ ಜಿಡಿಪಿ ಪ್ರಗತಿಗೆ ಕಾರ್ಮಿಕರ ಪಾತ್ರ ದೊಡ್ಡದು. ದೇಶದ ತಲಾದಾಯ ಹೆಚ್ಚಾದರೆ ಕಾರ್ಮಿಕರ ವೇತನವೂ ಕಾಲ ಕಾಲಕ್ಕೆ ಹೆಚ್ಚಳವಾಗುತ್ತದೆ ಎಂದು ತಿಳಿಸಿದರು.

ಶೀಘ್ರದಲ್ಲೇ ಪೌರಕಾರ್ಮಿಕರು ಖಾಯಂ
ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಆದರೆ ಕೆಲವರು ಪೌರ ಕಾರ್ಮಿಕರನ್ನು ಖಾಯಂ ಮಾಡುತ್ತಿಲ್ಲ ಎಂದು ದೂರುತ್ತಿದ್ದಾರೆ. ಸರಕಾರದ ಆದೇಶದಂತೆ ಶೇ.100ರಷ್ಟು ಗುತ್ತಿಗೆ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗುವುದು. ಪೌರ ಕಾರ್ಮಿಕರ ಖಾಯಮಾತಿ ವಿಚಾರದಲ್ಲಿ ಲೋಪ ಎಸುಗುವಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಐಎನ್‌ಟಿಯುಸಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಬಿ. ಸಂಜೀವರೆಡ್ಡಿ ಮಾತನಾಡಿ, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಪಕ್ಷ ರೂಪಿಸಿದ್ದ ಹಲವು ನಿಯಮಗಳನ್ನು ಮೋದಿ ನೇತೃತ್ವದ ಬಿಜೆಪಿ ಸರಕಾರ ತಿದ್ದುಪಡಿ ತಂದು, ಬಂಡವಾಳಶಾಹಿ ವರ್ಗಕ್ಕೆ ಅನುಕೂಲ ಮಾಡಿಕೊಡಲು ಕಾರ್ಮಿಕರ ಹಕ್ಕುಗಳನ್ನು ಬಲಿ ಕೊಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಸರಕಾರಿ ಕ್ಷೇತ್ರದಲ್ಲೀ ಶೇ.50 ರಷ್ಟು ನೌಕರರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಸರಕಾರದ ವಿರುದ್ಧ ಶೀಘ್ರದಲ್ಲೇ ಬೃಹತ್ ಮಟ್ಟದಲ್ಲಿ ಚಳವಳಿಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಐಎನ್‌ಟಿಯುಸಿಯ ನೂತನ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಕಾರ್ಯಾಧ್ಯಕ್ಷ ಎಸ್.ಎಸ್.ಪ್ರಕಾಶಂ ಸೇರಿದಂತೆ ಇತರರು ಇದ್ದರು.

ಆ.15ರಿಂದ ಇಂದಿರಾ ಕ್ಯಾಂಟಿನ್
ಕಾರ್ಮಿಕರು ಮತ್ತು ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ನೀಡುವ ಬಹುನಿರೀಕ್ಷಿತ ಮಹತ್ವಾಕಾಂಕ್ಷೆ ಯೋಜನೆ ಇಂದಿರಾ ಕ್ಯಾಂಟಿನ್‌ಗೆ ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗುವುದು.
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News