×
Ad

​ರಾಜ್ಯ ಸರಕಾರದ ನಿಲುವಿನ ವಿರುದ್ಧ ವ್ಯಾಪಕ ಆಕ್ರೋಶ

Update: 2017-05-04 18:29 IST

ಬೆಂಗಳೂರು, ಮೇ 4: ಗೋ ಹತ್ಯೆಯನ್ನು ತಡೆಯುವ ‘ಗೋರಕ್ಷಕರಿಗೆ’ ಕಾನೂನು ಕ್ರಮದಿಂದ ವಿನಾಯಿತಿ ನೀಡುವ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿದ ಕರ್ನಾಟಕ ಸರಕಾರದ ವಿರುದ್ಧ ಕಾನೂನು ತಜ್ಞರು, ರೈತ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗೋರಕ್ಷಣೆ ಕಾರ್ಯವನ್ನು ರಾಜ್ಯ ಸರಕಾರ ಮತ್ತು ಪೊಲೀಸರು ಮಾಡಬೇಕು. ಆ ಜವಾಬ್ದಾರಿಯನ್ನು ರಾಜ್ಯ ಸರಕಾರ ಹೊರಗಿನ ಗುಂಪುಗಳಿಗೆ ಅಥವಾ ವ್ಯಕ್ತಿಗಳಿಗೆ ಒಪ್ಪಿಸಿ ಸರಕಾರ, ಪೊಲೀಸರು ಕೈಕಟ್ಟಿ ಕೂರುವುದು ಕಾನೂನುಬಾಹಿರವಾಗುತ್ತದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿದೆ.

ಗೋರಕ್ಷಣೆ ಕಾನೂನು ಜಾರಿ ಮಾಡುವುದು ರಾಜ್ಯ ಸರಕಾರದ ಕರ್ತವ್ಯ. ಆದರೆ, ಸರಕಾರ ತನ್ನ ಕಾರ್ಯವನ್ನು ಗೋರಕ್ಷಣೆ ಮಾಡುವ ‘ಪುಂಡರ ಗುಂಪಿಗೆ’ ವಹಿಸಿದರೆ ಸಿಎಂ ಸಿದ್ದರಾಮಯ್ಯನವರ ಜಾತ್ಯತೀತತೆ, ಮತ್ತವರ ಬದ್ಧತೆಯ ಬಗ್ಗೆಯೇ ಸಂಶಯ ಮೂಡುತ್ತದೆ ಎಂದು ಪ್ರಾಂತ ರೈತ ಸಂಘದ ನಿಕಟ ಪೂರ್ವ ಅಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರಯೋಗವನ್ನು ದೇಶಾದ್ಯಂತ ನಡೆಸಲು ಬಿಜೆಪಿ ಹುನ್ನಾರ ನಡೆಸಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಗೋರಕ್ಷಕರ ಕಾರ್ಯವನ್ನು ಸಮರ್ಥಿಸಲು ಮುಂದಾಗಿರುವುದು ಅಕ್ಷಮ್ಯ ಎಂದು ಮಾನ್ಪಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೌಹಾರ್ದ ಕದಡಲು ಅವಕಾಶವಿಲ್ಲ: ‘ಕರ್ನಾಟಕ ಸರಕಾರ ರೂಪಿಸಿರುವ ಕಾನೂನನ್ನು ಪ್ರಶ್ನಿಸಿದ ಕಾರಣಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಅನಿವಾರ್ಯವಾಗಿ ಸಮರ್ಥಿಸಲಾಗಿದೆ. ಆದರೆ, ಸಮಾಜದಲ್ಲಿನ ಸಾಮರಸ್ಯ ಕದಡುವ ಕಾರ್ಯಕ್ಕೆ ಕಾನೂನಿನ ಬೆಂಬಲವಿಲ್ಲ’ ಎಂದು ಸರಕಾರ ಸ್ಪಷ್ಟಪಡಿಸಿದೆ ಎಂದು ಮಾಜಿ ಶಾಸಕ ಹಾಗೂ ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಹೇಳಿದ್ದಾರೆ. ಗೋರಕ್ಷಣೆ ನೆಪದಲ್ಲಿ ಕಾನೂನು ಭಂಗ ಸೃಷ್ಟಿಸಲು ಯಾವುದೇ ಕಾರಣಕ್ಕೂ ಅವಕಾಶ ಇಲ್ಲ. ತಾಂತ್ರಿಕ ಕಾರಣಕ್ಕಾಗಿ ಸರಕಾರ ತನ್ನ ಕಾನೂನನ್ನು ಸಮರ್ಥಿಸಿದೆ. ಆ ನೆಪದಲ್ಲಿ ಗೋರಕ್ಷಕರಿಗೆ ಬೆಂಬಲ ನೀಡುತ್ತಿದೆ ಎಂಬುದು ಸರಿಯಲ್ಲ. ಗೋರಕ್ಷಣೆ ನೆಪದಲ್ಲಿ ಹಲ್ಲೆ, ದರೋಡೆಗೆ ಅವಕಾಶವಿಲ್ಲ ಎಂದು ಸುಬ್ಬಯ್ಯ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಗೂಂಡಾಗಿರಿ ಸಲ್ಲ: "ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಬಗ್ಗೆ ನನಗೆ ಸಮರ್ಪಕ ಮಾಹಿತಿಯಿಲ್ಲ. ಆದರೆ, ಗೋರಕ್ಷಕರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡಬೇಕೆಂಬ ಸಂಘಪರಿವಾರದ ನಿಲುವಿಗೆ ಬೆಂಬಲ ನೀಡುವುದು ಸರಿಯಲ್ಲ" ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಿರುಪಯುಕ್ತ ಗೋವುಗಳ ವಧೆಗೆ ಕಾನೂನಿನಲ್ಲೇ ಅವಕಾಶವಿದೆ. ಈ ಬಗ್ಗೆ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಿವೆ. ವಾಸ್ತವ ಹೀಗಿರುವಾಗ ಗೋರಕ್ಷಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಗೋರಕ್ಷಣೆ ನೆಪದಲ್ಲಿ ಗೂಂಡಾಗಿರಿಗೆ ಅವಕಾಶವಿಲ್ಲ. ಆದರೆ, ಸಂಘ ಪರಿವಾರದ ಕ್ರಮವನ್ನು ರಾಜ್ಯ ಸರಕಾರ ಸಮರ್ಥಿಸಲು ಸಾಧ್ಯವಿಲ್ಲ ಎಂದು ಉಗ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News