15 ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ: ಮಲ್ಲಿಕಾರ್ಜುನ ಖರ್ಗೆ
Update: 2017-05-04 19:49 IST
ಹೊಸದಿಲ್ಲಿ, ಮೇ 4: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿಯನ್ನು ಇನ್ನು 15 ದಿನಗಳಲ್ಲಿ ಹೈಕಮಾಂಡ್ ನೇಮಕ ಮಾಡಲಿದೆ ಎಂದು ಲೋಕಸಭೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಸುಳಿವು ನೀಡಿದ್ದಾರೆ.
ಗುರುವಾರ ಹೊಸದಿಲ್ಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಆರೂವರೆ ವರ್ಷ ಪೂರೈಸಿದ್ದು, ಆ ಸ್ಥಾನಕ್ಕೆ ಬೇರೆಯವರನ್ನು ನೇಮಕಕ್ಕೆ ಹೈಕಮಾಂಡ್ ಸಮ್ಮತಿಸಿದೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ ನೂತನ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ಹೊಸ ತಂಡ ರಚನೆ ಮಾಡಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಯುವಕರಿಗೆ ರಾಹುಲ್ ಗಾಂಧಿ ಆದ್ಯತೆ ನೀಡಿದ್ದಾರೆ. ತಾನು ಆ ತಂಡಕ್ಕೆ ಅಗತ್ಯ ಬೆಂಬಲ-ಸಹಕಾರ ನೀಡಲಿದ್ದೇನೆ ಎಂದು ಖರ್ಗೆ ತಿಳಿಸಿದರು.