ಗೋರಕ್ಷಣೆಯ ನೆಪದಲ್ಲಿ ನಡೆಸುವ ಕ್ರಿಮಿನಲ್ ಕೃತ್ಯಗಳಿಗೆ ರಕ್ಷಣೆ ಇಲ್ಲ: ರಾಜ್ಯ ಸರಕಾರದ ಸ್ಪಷ್ಟನೆ
ಬೆಂಗಳೂರು, ಮೇ 4: ಕರ್ನಾಟಕ ಸರಕಾರವು "ಗೋರಕ್ಷಕರನ್ನು ರಕ್ಷಿಸುವ ಕಾನೂನನ್ನು ಸಮರ್ಥಿಸಿಕೊಂಡಿದೆ" ಎನ್ನುವ ಅರ್ಥದಲ್ಲಿ ಇಂದಿನ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಅನಗತ್ಯ ಗೊಂದಲಗಳು ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಸರಕಾರ ಸ್ಪಷ್ಟೀಕರಣ ನೀಡಿದೆ.
ಸರ್ವೋಚ್ಚ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದರಲ್ಲಿ ಗೋವಿನ ರಕ್ಷಣೆಯ ಹೆಸರಿನಲ್ಲಿ ಹಿಂಸೆಯನ್ನು ಮಾಡುವ ಗುಂಪುಗಳನ್ನು ನಿಷೇಧಿಸಬೇಕು ಎಂಬುದಾಗಿ ಕೋರಲಾಗಿತ್ತು. ಇದೇ ವೇಳೆ ಕರ್ನಾಟಕ ಗೋವಧೆ ತಡೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ, 1964 ರ ಪರಿಚ್ಛೇಧ 15 ಅಸಾಂವಿಧಾನಿಕ ಎಂದು ಪರಿಗಣಿಸುವಂತೆಯೂ ಕೋರಲಾಗಿತ್ತು. ಈ ಸಂಬಂಧ ಕರ್ನಾಟಕ ಸರಕಾರವು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೌಂಟರ್ ಅಫಿಡವಿಟ್ ಸಲ್ಲಿಸಿದೆ.
ಈ ಅಫಿಡವಿಟ್‌ನಲ್ಲಿ ಕರ್ನಾಟಕ ಗೋವಧೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964ರ ಪರಿಚ್ಛೇಧ 15 ರ ಅಡಿಯಲ್ಲಿ ಕಾನೂನು ರೀತಿಯಲ್ಲಿ ರಚಿಸಲಾದ ಗುಂಪು ಅಥವಾ ಈ ಕಾನೂನಿನಡಿ ಕ್ರಮ ಕೈಗೊಳ್ಳಬಹುದಾದ ಅಧಿಕಾರವುಳ್ಳ ವ್ಯಕ್ತಿಗಳು "ಉತ್ತಮ ಉದ್ದೇಶದಿಂದ" ಕಾನೂನಿನಲ್ಲಿ ನೀಡಲಾಗಿರುವ ಅವಕಾಶದನ್ವಯ ಜರಗಿಸಿದ ಕ್ರಮಗಳಿಗೆ ರಕ್ಷಣೆಯನ್ನು ನೀಡುತ್ತದೆಯೇ ಹೊರತು ಯಾವುದೇ ವ್ಯಕ್ತಿ, ಸಮೂಹಗಳು ಗೋರಕ್ಷಣೆಯ ಹೆಸರಿನಲ್ಲಿ ಎಸಗುವ ಅಪರಾಧ ಅಥವಾ ಕ್ರಿಮಿನಲ್ ಚಟುವಟಿಕೆಗಳಿಗೆ ರಕ್ಷಣೆಯನ್ನು ನೀಡುವುದಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಲಾಗಿದೆ.
ಈ ಕಾನೂನಿನ ಪರಿಚ್ಛೇಧ 15ರ ಅವಕಾಶವನ್ನು ಕಾನೂನು ರೀತಿಯಲ್ಲಿ ನೋಂದಾಯಿಸಲ್ಪಟ್ಟ ಯಾವುದೇ ಸಂಘ, ಸಂಸ್ಥೆಗಳಾಗಲಿ, ಅದರ ಸದಸ್ಯರಾಗಲಿ ಬಳಸಲು ಬರುವುದಿಲ್ಲ. ಅದೇ ರೀತಿ ಗೋವಿನ ರಕ್ಷಣೆಯನ್ನು ಮಾಡುವ ಉದ್ದೇಶದಿಂದ ರಚಿಸಿಕೊಂಡಿರುವ ಗುಂಪು, ಸಮೂಹಗಳಿಗೂ ಈ ಪರಿಚ್ಛೇಧದಡಿ ರಕ್ಷಣೆ ಇರುವುದಿಲ್ಲ. ಇಂತಹ ಸಂಘಟನೆಗಳು ಅದರ ಸದಸ್ಯರು ಅಥವಾ ಮತ್ತಿನ್ಯಾರೇ ಆಗಲಿ, ಗೋವಿನ ರಕ್ಷಣೆಯ ಹೆಸರಿನಲ್ಲಿ ಹಿಂಸಾ ಕೃತ್ಯಗಳಲ್ಲಿ ತೊಡಗುವುದು, ಸಾಮಾಜಿಕ ಸಾಮರಸ್ಯವನ್ನು ಕದಡುವಂತಹ ಕೃತ್ಯಗಳಿಗೆ ಮುಂದಾಗುವುದು, ಕಾನೂನನ್ನು ತಾವೇ ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸುವಂತಹ ಕೃತ್ಯಗಳಿಗೆ ತೊಡಗಿದರೆ ಅಂತಹವರಿಗೆ ಮೇಲಿನ ಕಾನೂನಿನ್ವಯ ಯಾವುದೇ ರಕ್ಷಣೆ ದೊರೆಯುವುದಿಲ್ಲ ಎನ್ನುವುದನ್ನು ನ್ಯಾಯಾಲಯದ ಮುಂದೆ ಸರಕಾರವು ಸ್ಪಷ್ಟಪಡಿಸಿದೆ.
ಅಷ್ಟೇ ಅಲ್ಲದೆ, ಅವರ ವಿರುದ್ಧ ತಕ್ಷಣ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎನ್ನುವುದನ್ನು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇಲೆ ಹೇಳಿದ ಕಾನೂನಿನ ಪರಿಚ್ಛೇಧ 15 ಅಸಾಂವಿಧಾನಿಕ ಎಂದು ಹೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ನ್ಯಾಯಾಲಯದ ಮುಂದೆ ಸಲ್ಲಿಸಲಾಗಿರುವ ಕೌಂಟರ್ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.