ತುಂಬಿದ ವಿಮಾನದಿಂದ ಕುಟುಂಬವನ್ನು ಹೊರದಬ್ಬಿದ ಡೆಲ್ಟಾ ಏರ್‌ಲೈನ್ಸ್

Update: 2017-05-05 13:52 GMT

ಲಾಸ್ ಏಂಜಲಿಸ್ (ಅಮೆರಿಕ), ಮೇ 5: ನಿಗದಿಗಿಂತ ಹೆಚ್ಚು ಟಿಕೆಟ್ ಮಾರಾಟವಾದ ಡೆಲ್ಟಾ ಏರ್‌ಲೈನ್ಸ್ ವಿಮಾನದಿಂದ ತಮ್ಮನ್ನು ಹೊರದಬ್ಬಲಾಗಿದೆ ಎಂದು ಕ್ಯಾಲಿಫೋರ್ನಿಯದ ದಂಪತಿಯೊಂದು ಆರೋಪಿಸಿದೆ.

ವಿಮಾನಗಳಿಂದ ಅನಾಗರಿಕ ಹಾಗೂ ಅಮಾನವೀಯ ವಿಧಾನಗಳಿಂದ ಪ್ರಯಾಣಿಕರನ್ನು ಹೊರದಬ್ಬುವ ಮೂಲಕ ಮೂಲಕ ಈಗಾಗಲೇ ಹೆಸರು ಕೆಡಿಸಿಕೊಂಡಿರುವ ಅಮೆರಿಕದ ವಾಯುಯಾನ ಉದ್ಯಮಕ್ಕೆ ಇದು ಮತ್ತೊಂದು ಹೊಡೆತವಾಗಿದೆ.

 ಅದೇ ವೇಳೆ, ಡೆಲ್ಟಾ ಏರ್‌ಲೈನ್ಸ್ ‘ಈ ದುರದೃಷ್ಟಕರ ಘಟನೆಗೆ ಕ್ಷಮೆ ಕೋರಿದೆ’ ಹಾಗೂ ಪರಿಹಾರ ನೀಡುವ ಭರವಸೆಯನ್ನು ಸಂತ್ರಸ್ತ ಕುಟುಂಬಕ್ಕೆ ನೀಡಿದೆ.
ಹಂಟಿಂಗ್ಟನ್ ಬೀಚ್‌ನ ಶಿಯರ್ ಕುಟುಂಬ ಕಳೆದ ವಾರ ಹವಾಯಿಯಿಂದ ಲಾಸ್ ಏಂಜಲಿಸ್‌ಗೆ ಪ್ರಯಾಣ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.

ಎಪ್ರಿಲ್ 23ರಂದು ನಡೆದ ಘಟನೆಯನ್ನು ದಂಪತಿ ಚಿತ್ರೀಕರಿಸಿಕೊಂಡಿದ್ದು, ‘ಯೂಟ್ಯೂಬ್’ನಲ್ಲಿ ಹಾಕಿದ್ದಾರೆ.

ದಂಪತಿಯ ಎರಡು ವರ್ಷದ ಮಗನ ಆಸನವನ್ನು ಬಿಟ್ಟುಕೊಡಬೇಕು ಎಂಬುದಾಗಿ ವಿಮಾನ ಸಿಬ್ಬಂದಿಯೊಬ್ಬರು ಹೇಳುವುದು ವೀಡಿಯೊದಲ್ಲಿ ಕೇಳಿಸುತ್ತದೆ.
ಆ ಆಸನಕ್ಕೆ ಹಣ ನೀಡಿದ್ದೇವೆ ಎಂದು ಹೇಳುವ ಮೂಲಕ ಆರಂಭದಲ್ಲಿ ಆಸನ ಬಿಟ್ಟುಕೊಡಲು ಮಗುವಿನ ತಂದೆ ಬ್ರಯಾನ್ ಶಿಯರ್ ನಿರಾಕರಿಸುತ್ತಾರೆ. ಆದಾಗ್ಯೂ, ಅವರನ್ನು ಹೆಂಡತಿ ಮತ್ತು ಇಬ್ಬರು ಮಕ್ಕಳ ಸಮೇತ ವಿಮಾನದಿಂದ ಬಳಿಕ ಹೊರದಬ್ಬಲಾಗುತ್ತದೆ.

‘‘ಇದು ಫೆಡರಲ್ ಸರಕಾರದ ಕಾನೂನು ಪ್ರಕಾರ ಅಪರಾಧ. ನೀವು ಮತ್ತು ನಿಮ್ಮ ಹೆಂಡತಿ ಜೈಲಿನಲ್ಲಿರುತ್ತೀರಿ ಮತ್ತು ನಿಮ್ಮ ಮಕ್ಕಳು ಅನಾಥಾಶ್ರಮದಲ್ಲಿ ಬೆಳೆಯುತ್ತಾರೆ’’ ಎಂಬುದಾಗಿ ಓರ್ವ ಸಿಬ್ಬಂದಿ ಹೇಳುವುದು ವೀಡಿಯೊದಲ್ಲಿ ಕೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News