×
Ad

ತಿಂಗಳಿಗೊಮ್ಮೆ ಬರ ಪರಿಹಾರ ಕಾಮಗಾರಿ ಪರಿಶೀಲನೆ ಕಡ್ಡಾಯ: ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ

Update: 2017-05-06 13:31 IST

ಬೆಂಗಳೂರು, ಮೇ 6: ಬರ ಪೀಡಿತ ಪ್ರದೇಶಗಳಿಗೆ ತಿಂಗಳಲ್ಲಿ ಒಮ್ಮೆ ಕಡ್ಡಾಯವಾಗಿ ಭೇಟಿ ನೀಡಿ ಬರ ಪರಿಹಾರ ಕಾಮಗಾರಿಗಳ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿವಿಧ ಇಲಾಖೆಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಗಾಗಿ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮುಖ್ಯಮಂತ್ರಿ ಈ ಸೂಚನೆ ನೀಡಿದರು.  

ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ ಧೋರಣೆ ಸಹಿಸುವುದಿಲ್ಲ ಎಂದು ಎಚ್ಚರಿಸಿರುವ ಮುಖ್ಯಮಂತ್ರಿ, ಯೋಜನೆಗಳು ವಿಳಂಬವಿಲ್ಲದೆ, ದುರುಪಯೋಗ, ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ನಿಗದಿತ ಅವಧಿಯೊಳಗೆ ಫಲಾನುಭವಿಗಳನ್ನು ತಲುಪಲೇಬೇಕು ಎಂದು ಹೇಳಿದ್ದಾರೆ. 
ಸರ್ಕಾರದ ಕಾರ್ಯಗಳ ಜಾರಿಯಲ್ಲಿ ಅನಗತ್ಯ ವಿಳಂಬವಾಗಬಾರದು. ವಿಳಂಬಕ್ಕೆ ಕುಂಟು ನೆಪಗಳನ್ನು ಹೇಳಬಾರದು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಕೆಲಸ ಮಾಡಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಅನುಭವವನ್ನು ಧಾರೆ ಎರೆದು ಸರ್ಕಾರದ ಕಾರ್ಯಕ್ರಮಗಳ ಫಲ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಮಟ್ಟದಲ್ಲಿ ಕೆಲಸ ಮಾಡಿದ ಅನುಭವ ಇದೆ ಎಂಬ ಕಾರಣಕ್ಕಾಗಿಯೇ ನಿಮ್ಮನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಹೀಗಾಗಿ ತಿಂಗಳಲ್ಲಿ ಒಂದು ಬಾರಿಯಾದರೂ ಜಿಲ್ಲೆಗಳಿಗೆ ಹೋಗಿ. ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುವ ಸ್ಥಳಕ್ಕೆ ಭೇಟಿ ಕೊಡಿ. ಪ್ರಗತಿ ಪರಿಶೀಲನೆ ಮಾಡಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. 
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮಾರ್ಗದರ್ಶನ, ಸಲಹೆ, ಸೂಚನೆ ಕೊಡಿ. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಬದಲಾವಣೆ ಅಗತ್ಯ ಎನಿಸಿದರೆ ಆ ಕೆಲಸ ನಿರ್ವಹಿಸಿ. ಜಿಲ್ಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸಕ್ತಿ ವಹಿಸಿ ಕೆಲಸ ಮಾಡಿದರೆ ಸರ್ಕಾರದ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತದೆ.  ಜಿಲ್ಲಾಡಳಿತ ಯಂತ್ರವೂ ಚುರುಕಾಗುತ್ತದೆ. ಉಸ್ತುವಾರಿ ಕಾರ್ಯದರ್ಶಿಗಳ ನೇಮಕದ ಹಿಂದಿನ ಉದ್ದೇಶವೂ ಅದೇ ಆಗಿದೆ ಎಂದರು.
ಹಿಂಗಾರು ಹಂಗಾಮಿನಲ್ಲಿ ರಾಜ್ಯದ 160 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಬರ ಪೀಡಿತ ಪ್ರದೇಶಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳು ಆಗಾಗ್ಗೆ ಭೇಟಿ ನೀಡುವುದರ ಜೊತೆಗೆ ಗೋಶಾಲೆ, ಮೇವು ಬ್ಯಾಂಕ್‍ಗಳ ಸ್ಥಿತಿಗತಿ ಗಮನಿಸಬೇಕು. 

ಜಾನುವಾರುಗಳಿಗೆ ಮೇವು, ಜನರಿಗೆ ಕುಡಿಯುವ ನೀರು, ಉದ್ಯೋಗ ಒದಗಿಸುವ ಕಾರ್ಯದ ಬಗ್ಗೆ ನಿಗಾ ವಹಿಸಬೇಕು. ಗೋಶಾಲೆಗಳಿಗೆ ಬರುವ ಜನರಿಗೆ ಊಟ, ವಸತಿ ವ್ಯವಸ್ಥೆ ಸರಿಯಾಗಿ ಸಿಗುವಂತೆ ನೋಡಿಕೊಳ್ಳಬೇಕು. 

ಪ್ರಮುಖವಾಗಿ ವಸತಿ ಯೋಜನೆ ಪ್ರಗತಿ ಕುರಿತು ಪರಿಶೀಲನೆ ನಡೆಸಬೇಕು. ನಿಗಧಿತ ಅವಧಿಯೊಳಗೆ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. 

ಜಾನುವಾರುಗಳ ಗಣತಿ ಮಾಡಿ
ಬರ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಎಷ್ಟು ಮೇವು ಬೇಕಾಗುತ್ತದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬೇಕು. ಇದಕ್ಕಾಗಿ ಪ್ರತಿ ಹಳ್ಳಿಯಲ್ಲಿ ಜಾನುವಾರುಗಳ ಗಣತಿ ಮಾಡಿ ಎಂದು ಈ ಹಿಂದೆ ಸೂಚನೆ ನೀಡಲಾಗಿದೆ. ಆ ಕುರಿತು ಗಮನ ಹರಿಸಿ ಎಂದು ಮುಖ್ಯಮಂತ್ರಿಯವರು ಸೂಚನೆ ನೀಡಿದರು. 

ಕ್ರಮಕ್ಕೆ ಗುರಿಯಾಗಬೇಕಾದೀತು:
ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬದವರಿಗೆ ಪರಿಹಾರ ಒದಗಿಸುವ ಜೊತೆಗೆ ಮೃತ ರೈತನ ಪತ್ನಿಗೆ ಮಾಸಾಶನ, ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆ ನೀಡುವ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು. ಈ ವಿಚಾರದಲ್ಲಂತೂ ನಿಧಾನ ಧೋರಣೆ ಅನುಸರಿಸಿದರೆ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸಿಎಂ ಎಚ್ಚರಿಸಿದರು. 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ರತ್ನಪ್ರಭಾ, ವಿಜಯ ಭಾಸ್ಕರ್, ಮುಖ್ಯಮಂತ್ರಿಯವರು ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್, ತುಷಾರ್ ಗಿರಿನಾಥ್ ಸಭೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News