×
Ad

​ಸಂವಿಧಾನ ಬದಲಾವಣೆಗೂ ಬಿಜೆಪಿ ಹಿಂಜರಿಯುವುದಿಲ್ಲ: ಡಾ.ಕೆ.ರಹ್ಮಾನ್‌ಖಾನ್

Update: 2017-05-06 18:33 IST

ಬೆಂಗಳೂರು, ಮೇ 6: ಸಂಘಪರಿವಾರದ ರಾಜಕೀಯ ಮುಖವಾಡವಾಗಿರುವ ಬಿಜೆಪಿ, ಭವಿಷ್ಯದಲ್ಲಿ ದೇಶದ ಜಾತ್ಯತೀತ ಸಂವಿಧಾನವನ್ನು ಬದಲಾಯಿಸಲು ಹಿಂಜರಿಯುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ಸ್ಪಷ್ಟಬಹುಮತವನ್ನು ಹೊಂದಿರುವ ಬಿಜೆಪಿ, ರಾಜ್ಯಸಭೆಯಲ್ಲೂ ಬಹುಮತ ಪಡೆಯಲು ಹರಸಾಹಸ ಪಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯಸಭೆಯಲ್ಲಿ ಅವರಿಗೆ ಬಹುಮತ ಲಭ್ಯವಾದರೆ, ಸಂವಿಧಾನದ ಬದಲಾವಣೆಗೂ ಹಿಂಜರಿಯುವುದಿಲ್ಲ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಜಾತ್ಯತೀತ ಸಂವಿಧಾನವನ್ನು ಆರೆಸ್ಸೆಸ್ ಎಂದಿಗೂ ಒಪ್ಪಿಕೊಂಡಿಲ್ಲ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದು ಆರೆಸ್ಸೆಸ್ ಉದ್ದೇಶ. ಈ ಹಿನ್ನೆಲೆಯಲ್ಲಿ ಅವಕಾಶ ಸಿಕ್ಕಿದರೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ಸಂವಿಧಾನದಲ್ಲಿ ಬದಲಾವಣೆಗೆ ಮುಂದಾದರೂ ಅಚ್ಚರಿ ಪಡಬೇಕಿಲ್ಲ ಎಂದು ರಹ್ಮಾನ್‌ಖಾನ್ ಹೇಳಿದರು.

70 ವರ್ಷಗಳಿಂದ ಆರೆಸ್ಸೆಸ್ ಬಯಸಿದ್ದಂತೆ ಈ ಬಾರಿ ಅವರಿಗೆ ಲೋಕಸಭೆಯಲ್ಲಿ ಬಹುಮತ ಸಿಕ್ಕಿದೆ. ಸಂಘಪರಿವಾರ ತನ್ನ ದೂರದೃಷ್ಟಿಯ ಕಾರ್ಯಸೂಚಿಯಂತೆ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿ ತನ್ನವರನ್ನು ತರುವ ಪ್ರಯತ್ನದಲ್ಲಿ ಬಹುಮಟ್ಟಿಗೆ ಯಶಸ್ಸನ್ನು ಗಳಿಸಿದೆ ಎಂದರು.

ಸಮುದಾಯದ ಕಲ್ಯಾಣದ ಪರವಾಗಿ ಉಲಮಾಗಳು, ಬುದ್ಧಿಜೀವಿಗಳು ಹಾಗೂ ರಾಜಕಾರಣಿಗಳ ಧ್ವನಿ ಒಂದೇ ಆಗಿರಬೇಕು ಎಂದ ಅವರು, ಮುಸ್ಲಿಮ್ ಯುವಕರು ಸಮಾಜದ ಮುಖ್ಯವಾಹಿನಿಯಿಂದ ದೂರವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿರುವ ಎಲ್ಲ ಮುಸ್ಲಿಮರ ಪರಿಸ್ಥಿತಿಯನ್ನು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ತಿಳಿದುಕೊಂಡಿದೆ. ಬೇರೆ ಯಾವುದೇ ಸಂಘ, ಸಂಸ್ಥೆಗೆ ಇಷ್ಟೊಂದು ಪ್ರಮಾಣದಲ್ಲಿ ಮುಸ್ಲಿಮರ ಪರಿಸ್ಥಿತಿಯ ಬಗ್ಗೆ ಮಾಹಿತಿ ಇರಲಿಕ್ಕಿಲ್ಲ. ತ್ರಿವಳಿ ತಲಾಕ್ ಸಂಬಂಧ ದೇಶದಲ್ಲಿ ನಡೆಯುತ್ತಿರುವ ಚರ್ಚೆ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಮಂಡಳಿಗೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News