ಕೊಲೆ ಭೀತಿಯಲ್ಲಿ ದಲಿತ ಕುಟುಂಬ: ಸೂಕ್ತ ರಕ್ಷಣೆ ಒದಗಿಸಲು ಪಿಯುಸಿಎಲ್ ಆಗ್ರಹ

Update: 2017-05-06 13:11 GMT

ಬೆಂಗಳೂರು, ಮೇ 6: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹಾಲಗೇರ ಗ್ರಾಮದಲ್ಲಿ 2013ರಲ್ಲಿ ನಡೆದಿದ್ದ ದಲಿತ ಯುವತಿ ಕುಸುಮಾ ಕೊಲೆ ಪ್ರಕರಣದ ಆರೋಪಿಗಳ ಬಂಧನದ ಹಿನ್ನೆಲೆಯಲ್ಲಿ ಗ್ರಾಮದ ದಲಿತರು ಜೀವಭಯದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತರಿಗೆ ಸೂಕ್ತ ಪೊಲೀಸ್ ರಕ್ಷಣೆ ಕಲ್ಪಿಸಬೇಕೆಂದು ಪಿಯುಸಿಎಲ್ ಒತ್ತಾಯಿಸಿದೆ.

ಕುಸುಮಾಳನ್ನು ಒತ್ತಾಯಪೂರ್ವಕವಾಗಿ ದೇವದಾಸಿ ಮಾಡಲು ಯತ್ನಿಸಿದ ಪೂಜಾರಿ ಗಾಳೆಪ್ಪ ಪರಮಣ್ಣ, ಶರಣಪ್ಪ, ಪರಮಣ್ಣ ಪೂಜಾರಿ ವಿರುದ್ಧ 1989ರ ದೌರ್ಜನ್ಯ ತಡೆ ಕಾಯ್ದೆಯಡಿ ಕೂಡಲೇ ಮೊಕದ್ದಮೆ ದಾಖಲು ಮಾಡಿ, ತತಕ್ಷಣವೇ ಬಂಧಿಸಬೇಕು.

ಕೂಲಂಕಷ ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡಬೇಕು. ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದು ಕಂಡುಬಂದಿದ್ದು, ಈ ಸಂಬಂಧ ಸಮಾಜ ಕಲ್ಯಾಣ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕು. ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಮತ್ತು ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿಯನ್ನು ನೀಡಬೇಕು.

ಈ ಪ್ರಕರಣದ ಮಾಧ್ಯಮದಲ್ಲಿ ಸುದ್ದಿ ಬಿತ್ತರಗೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ವಪ್ರೇರಣೆಯಿಂದ ದೂರು ದಾಖಲಿಸಿಕೊಂಡು ರಾಜ್ಯ ಮಾನವ ಹಕ್ಕುಗಳ ಆಯೋಗ, ಎಸ್ಸಿ ಆಯೋಗ, ಮಹಿಳಾ ಹಕ್ಕುಗಳ ಆಯೋಗ ಸ್ಥಳಕ್ಕೆ ಖುದ್ದು ಭೇಟಿ ನೀಡಿ, ವಾಸ್ತವ ಪರಿಸ್ಥಿತಿ ಅಧ್ಯಯನ ನಡೆಸಿ ದೇವದಾಸಿ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಪಿಯುಸಿಎಲ್ ಆಗ್ರಹಿಸಿದೆ.

ದೇವದಾಸಿ ಆರೆಮ್ಮಳ ಪುತ್ರಿ ಕುಸುಮಾಳನ್ನು ಪ್ರೀತಿಸುವ ನೆಪದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆ ಬಳಿಕ ಆಕೆಯನ್ನು ದೇವದಾಸಿಯನ್ನಾಗಿಸಲು ಆರೋಪಿ ಭೀಮನಗೌಡ ಮತ್ತು ಆತನ ಸಹಚರರು ಯತ್ನಿಸಿದ್ದಾರೆ. ಕುಸುಮಾ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಅಪಹರಿಸಿ 2013ರಲ್ಲಿ ಕೊಲೆಗೈಯಲಾಗಿತ್ತು. ಆ ಬಳಿಕ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 2017ರ ಮಾರ್ಚ್ 28ಕ್ಕೆ ಮುಚ್ಚಿಹೋಗಿದ್ದ ಕುಸುಮಾಳ ಕೊಲೆ ಪ್ರಕರಣ ಬಯಲಿಗೆ ಬಂದಿದ್ದು, ಈ ಸಂಬಂಧ ಪಿಯುಸಿಎಲ್ ನೇತೃತ್ವದಲ್ಲಿ ಸತ್ಯಶೋಧನೆ ನಡೆಸಿದೆ. ಅಲ್ಲದೆ, ಕರ್ತವ್ಯಲೋಪವೆಸಗಿದ ಸುರಪುರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸೇರಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿಯುಸಿಎಲ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News