​ಯೋಧರ ಹತ್ಯೆ ತಡೆಯದಿದ್ದರೆ ಪ್ರಧಾನಿಗೆ ಸೀರೆ-ಬಳೆ ರವಾನೆ: ಲಕ್ಷ್ಮೀ ಹೆಬ್ಬಾಳ್ಕರ್‌

Update: 2017-05-06 13:21 GMT

ಬೆಂಗಳೂರು, ಮೇ 6: ಭಾರತೀಯ ಸೈನಿಕರ ರಕ್ಷಣೆಗೆ ಕೇಂದ್ರ ಸರಕಾರ ಮುಂದಾಗದಿದ್ದರೆ ಸೀರೆ ಮತ್ತು ಬಳೆಗಳನ್ನು ಪ್ರಧಾನಿ ಮತ್ತು ರಕ್ಷಣಾ ಸಚಿವಾಲಯಕ್ಕೆ ಪೋಸ್ಟ್ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್‌ ಎಚ್ಚರಿಕೆ ನೀಡಿದ್ದಾರೆ.

ಪಾಕಿಸ್ತಾನ ಸೇನೆಯಿಂದ ನಡೆದ ಭಾರತೀಯ ಯೋಧರ ಶಿರಚ್ಛೇದ ಪ್ರಕರಣದ ಕುರಿತು ಮೌನ ತಾಳಿರುವ ಪ್ರಧಾನಿ ನರೇಂದ್ರ ಮೋದಿ ಧೋರಣೆ ಖಂಡಿಸಿ ಇಂದು ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದ ಮೌರ್ಯ ವೃತ್ತದ ಗಾಂಧೀಜಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯುಪಿಎ ಸರಕಾರದ ಅವಧಿಯಲ್ಲಿ 100 ಜನ ಸೈನಿಕರ ಹತ್ಯೆ ನಡೆದಿತ್ತು. ಆದರೆ, ಕೇಂದ್ರ ಬಿಜೆಪಿ ಸರಕಾರದ 3 ವರ್ಷ ಅಧಿಕಾರಾವಧಿಯಲ್ಲಿ 200ಕ್ಕೂ ಹೆಚ್ಚು ಭಾರತದ ಸೈನಿಕರ ಹತ್ಯೆಯಾಗಿದೆ. ಅಲ್ಲದೆ ಯುಪಿಎ ಸರಕಾರದ ಅವಧಿಯಲ್ಲಿ ಸೈನಿಕರ ಹತ್ಯೆಯನ್ನು ಖಂಡಿಸಿ ಬಿಜೆಪಿಯ ಸ್ಮೃತಿ ಇರಾನಿ ಬಳೆಗಳನ್ನು ಪೋಸ್ಟ್ ಮಾಡುವ ಮೂಲಕ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು "ಹೇಡಿ ಪ್ರಧಾನಿ" ಎಂದು ಖಂಡಿಸಿದ್ದರು. ಆದರೆ ಈಗ ಅವರದೇ ಸರಕಾರದ ಅಧಿಕಾರಾವಧಿಯಲ್ಲಿ ಹೆಚ್ಚು ಸೈನಿಕರ ಹತ್ಯೆಯಾಗಿದೆ. ಆದರೆ ಇದು ಸಚಿವೆ ಸ್ಮತಿ ಇರಾನಿ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.

ದೇಶ ಕಾಯುತ್ತಿರುವ ಸೈನಿಕರನ್ನು ರಕ್ಷಣೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ದೇಶದ ಗಡಿ ದಾಟಿ ಸೈನಿಕರನ್ನು ಶಿರಚ್ಛೇದ ಮಾಡುತ್ತಿದ್ದರೂ ಪಾಕಿಸ್ತಾನದ ಸೈನಿಕರಿಗೆ ತಕ್ಕ ಉತ್ತರ ನೀಡುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಗುಡುಗಿದರು.

ನೋಟು ನಿಷೇಧದ ಮೂಲಕ ಭ್ರಷ್ಟಾಚಾರ ನಿಗ್ರಹ, ಕಪ್ಪು ಹಣ ನಿಗ್ರಹ, ನಕ್ಸಲ್ ಚಟುವಟಿಕೆ ನಿಗ್ರಹ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘಂಟಾಘೋಷವಾಗಿ ಸಾರಿದ್ದರು. ಆದರೆ ಅವರು ಈ ಮಾತನ್ನು ಮರೆತಂತಿದ್ದಾರೆ ಎಂದು ಟೀಕಿಸಿದರು.

ದೇಶದ ಹಾಗೂ ಸೈನಿಕರ ರಕ್ಷಣೆ ವಿಚಾರ ಬಂದಾಗ ಪಕ್ಷವನ್ನು ಬದಿಗಿಟ್ಟು ಐಕ್ಯತೆಯಿಂದ ಕಾರ್ಯನಿರ್ವಹಿಸಬೇಕಿದೆ. ಕೇಂದ್ರ ಸರಕಾರದ ಧೋರಣೆಯನ್ನು ಖಂಡಿಸಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಮೋದಿ ತಮ್ಮ ಮೌನವನ್ನು ಮುರಿದು ಯೋಧರ ರಕ್ಷಣೆಗೆ ನಿಲ್ಲದಿದ್ದರೆ ಪ್ರತಿಭಟನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ತಿನ ಸದಸ್ಯೆ ಜಯಮಾಲಾ ಮಾತನಾಡಿ, ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದು, ಅಲ್ಲಿನ ಶ್ರೀಸಾಮಾನ್ಯ ಜೀವನ ಅತಂತ್ರವಾಗಿದೆ. ಇಲ್ಲಿನ ಬಹುತೇಕ ಶಾಲೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಈ ಭಾಗದಲ್ಲಿ ಸರಣಿಯೋಪಾದಿಯಲ್ಲಿ ಯೋಧರ ಹತ್ಯೆಯಾಗುತ್ತಿದ್ದರು ಬಿಜೆಪಿ ಸರಕಾರ ತುಟಿ ಬಿಚ್ಚುತ್ತಿಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ ನಗರದ ಮಹಿಳಾ ಘಟಕದ ಸೌಮ್ಯರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ, ರಾಜ್ಯ ಮಹಿಳಾ ಘಟಕದ ಪದಾಧಿಕಾರಿಗಳಾದ ಕಮಲಮ್ಮ, ಭಾರತಿಶಂಕರ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News