ಖಾಸಗಿ ಕಾಲೇಜುಗಳಲ್ಲಿ ಜಾತೀಯತೆ: ಬರಗೂರು ರಾಮಚಂದ್ರಪ್ಪ ಆತಂಕ
ಬೆಂಗಳೂರು, ಮೇ 6: ರಾಜ್ಯದಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ಎಸ್ಸಿ, ಎಸ್ಟಿ ಅಧ್ಯಾಪಕರನ್ನು ನೇಮಕಾತಿ ಮಾಡಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಸರಕಾರದ ಅನುದಾನವನ್ನು ನಿರಾಕರಿಸಲಾಗುತ್ತಿದೆ ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಧ್ಯಾಪಕರ ಸಂಘವು ಡಾ. ಬಿ.ಆರ್.ಅಂಬೇಡ್ಕರ್ ಅವರ 126ನೆ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಅನುದಾನಕ್ಕಾಗಿ ಮುಗಿಬೀಳುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲಾತಿ ಮೂಲಕ ಎಸ್ಸಿ, ಎಸ್ಟಿ ಸಮುದಾಯದ ಅಧ್ಯಾಪಕರನ್ನು ನೇಮಕಾತಿ ಮಾಡಿಕೊಳ್ಳಬೇಕಾಗುತ್ತದೆ ಎಂಬ ಉದ್ದೇಶದಿಂದ ಸರಕಾರದ ಅನುದಾನವನ್ನು ತಿರಸ್ಕರಿಸುತ್ತಿವೆ ಎಂದರು.
ಅನುದಾನಿತ ಕಾಲೇಜುಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸರಕಾರದ ಸ್ಪಷ್ಟ ಆದೇಶವಿದೆ. ಆದರೆ, ಬಹುತೇಕ ಕಾಲೇಜುಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳು ಖಾಲಿಯಿವೆ. ಹೀಗೆ ಜಾತೀಯತೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಕಾಲೇಜು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ತರಗತಿಯಲ್ಲಿ ತಂತ್ರಜ್ಞಾನ ಬೇಡ: ಇತ್ತೀಚಿನ ದಿನಗಳಲ್ಲಿ ವಿಜ್ಞಾನಿ, ತತ್ವಜ್ಞಾನಿಗಳ ಸ್ಥಾನವನ್ನು ತಂತ್ರಜ್ಞಾನವು ಆವರಿಸಿಕೊಂಡಿದೆ. ಆಡಳಿತಾತ್ಮಕ ವಿಷಯಗಳಲ್ಲಿ ತಂತ್ರಜ್ಞಾನ ಬಳಕೆಯಾಗಲಿ. ಆದರೆ, ತರಗತಿಯೊಳಗೆ ತಂತ್ರಜ್ಞಾನ ನುಸುಳಿದರೆ ಸೃಜನಾತ್ಮಕತೆ ನಾಶವಾಗಲಿದೆ ಎಂದು ಅವರು ಎಚ್ಚರಿಸಿದರು.
ಏಕರೂಪ ಶಿಕ್ಷಣ ಜಾರಿಗೆ ತರದಿದ್ದರೆ ಸಂವಿಧಾನವನ್ನು ಅಗೌರವಿಸಿದಂತೆ. ಅಂಗನವಾಡಿ ಹಂತದಲ್ಲಿಯೇ ಮಕ್ಕಳ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಕೇವಲ ಬಡವರು ಹಾಗೂ ದಲಿತರ ಹೊರತು ಬೇರೆ ಸಮುದಾಯದ ಮಕ್ಕಳು ಕಾಣ ಸಿಗುವುದಿಲ್ಲ. ಹಾಗೆಯೇ ಉನ್ನತ ಶಿಕ್ಷಣದ ಹಂತದಲ್ಲಿ ಸಾಮಾನ್ಯ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣದ ನಡುವೆ ಭಾರಿ ಕಂದಕವೇ ಏರ್ಪಟ್ಟಿದೆ. ಇಂತಹ ತಾರತಮ್ಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಶಿಕ್ಷಕ ಸಮುದಾಯ ಹೋರಾಟ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
-ಪ್ರೊ.ಬರಗೂರು ರಾಮಚಂದ್ರಪ್ಪ ಹಿರಿಯ ಸಾಹಿತಿ