×
Ad

​‘ಬಿಜೆಪಿ ಮಿಷನ್ 150’ ಯಶಸ್ವಿಯಾಗುವುದಿಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2017-05-06 20:41 IST

ಬೆಳಗಾವಿ, ಮೇ 6: "ಬಿಜೆಪಿಯ ಮಿಷನ್ 150" ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಲು ಅವರ ಪಕ್ಷದ ಕೆಲ ನಾಯಕರು ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯು 150 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಈ ಹಿಂದೆ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಕಿತ್ತಾಡಿಕೊಂಡ ರೀತಿ, ಮೂವರು ಮುಖ್ಯಮಂತ್ರಿಯಾಗಿದ್ದನ್ನು ಜನ ಮರೆತಿಲ್ಲ ಎಂದರು.

ಬಿಜೆಪಿ ಪಕ್ಷದ ನಾಯಕರ ನಡುವೆ ಇರುವ ಸಂಘರ್ಷ ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ಕೇಂದ್ರದ ಮಟ್ಟದಲ್ಲಿಯೂ ಇವರ ಸಂಘರ್ಷಕ್ಕೆ ಬೆಂಬಲ ಸಿಗುತ್ತಿದೆ. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಯಡಿಯೂರಪ್ಪಗೆ ಅಧಿಕಾರ ಕೈ ತಪ್ಪಲು ಬಿಜೆಪಿಯ ಕೇಂದ್ರದ ನಾಯಕರು ಕಾರಣ. ಈ ವಿಷಯ ಇನ್ನೂ ರಾಜ್ಯದ ಜನರಿಗೆ ಗೊತ್ತಿಲ್ಲ ಎಂದು ಅವರು ಹೇಳಿದರು.

ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಸಂಘರ್ಷಕ್ಕೆ ಕೇಂದ್ರದ ಕೆಲವು ಬಿಜೆಪಿ ನಾಯಕರೇ ಕಾರಣ. ಈಗಾಗಲೆ ಬಿಜೆಪಿಯಲ್ಲಿ ಮೂರು ಗುಂಪುಗಳು ರಚನೆಯಾಗಿವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತಷ್ಟು ಗುಂಪುಗಳು ತಲೆಎತ್ತಲಿವೆ. ಈ ಗುಂಪುಗಳ ಕಾರಣದಿಂದಲೆ ಬಿಜೆಪಿ ನೆಲ ಕಚ್ಚಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸತ್ಯ ನುಡಿದ ಸಿಎಂ: ರಾಜ್ಯದ ನೀರಾವರಿ ಯೋಜನೆಗಳಿಗೆ 40 ಸಾವಿರ ಕೋಟಿ ರೂ.ಖರ್ಚು ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶುಕ್ರವಾರ ವಿಧಾನಸೌಧದಲ್ಲಿ ಬಾಳೇಕುಂದ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲ ಬಾರಿಗೆ ಸತ್ಯ ನುಡಿದಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ನೀರಾವರಿ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಲು ಸಾಧ್ಯವಾಗುತ್ತಿಲ್ಲ. ನಾವು ಇದುವರೆಗೆ ವೆಚ್ಚದ ಬಗ್ಗೆ ಚರ್ಚೆ ಮಾಡಿದಂತೆ ಹಣವನ್ನು ಖರ್ಚು ಮಾಡಲು ಆಗಿಲ್ಲ. ಇದರಿಂದಾಗಿ, ನೀರಾವರಿ ಯೋಜನೆಗಳ ವೆಚ್ಚವು ಪ್ರತಿದಿನ ಹೆಚ್ಚುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ನೀರಾವರಿ ಯೋಜನೆಗಳ ಕಾಮಗಾರಿಯೂ ಇದೇ ಮಾದರಿಯಲ್ಲಿ ಮುಂದುವರಿದರೆ 50 ವರ್ಷ ಕಳೆದರೂ ಕೃಷ್ಣಾ ನದಿಗೆ ಸಂಬಂಧಿಸಿದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಸರಕಾರದ ವಿರುದ್ಧ ವಾಗ್ದಾಳಿ: ಫಸಲ್ ಬಿಮಾ ಹೆಸರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರ ದರೋಡೆ ಮಾಡುತ್ತಿವೆ. ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸರಕಾರ ವಿಫಲವಾಗಿದೆ. ಕೆರೆಯ ಹೂಳನ್ನು ತೆಗೆಯಲು ಈ ಸಕಾರಕ್ಕೆ ಸಾಧ್ಯವಾಗುತ್ತಿಲ್ಲ. ಜನರೇ ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಪಾಲಿನ ಕೃಷ್ಣಾ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ನೀರಾವರಿ ಯೋಜನೆಗಳ ಹೆಸರಿನಲ್ಲಿ ಕೋಟ್ಯಂತರ ರೂ.ಲೂಟಿ ಮಾಡಲಾಗುತ್ತಿದೆ. ಈ ಬಗ್ಗೆ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಭೌಗೋಳಿಕವಾಗಿ ಹೆಚ್ಚು ವಿಸ್ತಾರವನ್ನು ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ವಿಂಗಡಿಸುವ ಅನಿವಾರ್ಯತೆಯಿದೆ. ಆದರೆ, ಎಂಇಎಸ್ ಪುಂಡಾಟಿಕೆಯನ್ನು ಅಂತ್ಯಗೊಳಿಸಬೇಕಾದರೆ ಬೆಳಗಾವಿಯನ್ನು ಅಖಂಡ ಜಿಲ್ಲೆಯಾಗಿ ಉಳಿಸಿಕೊಳ್ಳುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 120 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಬೇಕಾದಲ್ಲಿ, ಉತ್ತರ ಕರ್ನಾಟಕ ಭಾಗದಿಂದ ನಾನು ವಿಧಾನಸಭೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರು ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ಬಗ್ಗೆ ಸೂಕ್ತವಾದ ನಿರ್ಧಾರ ಕೈಗೊಳ್ಳಲಾಗುವುದು.
-ಎಚ್.ಡಿ.ಕುಮಾರಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News