ಹೈಕಮಾಂಡ್‌ಗೆ ಕಪ್ಪ ಕಾಣಿಕೆ ವಿಚಾರ: ಬಿಎಸ್‌ವೈ, ಅನಂತಕುಮಾರ್‌ ವಿಚಾರಣೆಗೆ ಹಾಜರಾಗಲು ನಿರ್ದೇಶನ

Update: 2017-05-06 15:18 GMT

ಬೆಂಗಳೂರು, ಮೇ 6: ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಿರುವ ಮಾತುಕತೆಗೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್‌ಕುಮಾರ್‌ಗೆ ಸೈಬರ್ ಕ್ರೈಂ ಅಧಿಕಾರಿಗಳ ವಿಚಾರಣೆಗೆ ಹಾಜರಾಗಲು ಒಂದನೆ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ನಿರ್ದೇಶನ ನೀಡಿದೆ.

ಈ ಸಂಬಂಧ ಧ್ವನಿ ಪರೀಕ್ಷೆಗೆ ಯಡಿಯೂರಪ್ಪ ಹಾಗೂ ಅನಂತಕುಮಾರ್‌ಗೆ ಹಾಜರಾಗಲು ನಿರ್ದೇಶಿಸಬೇಕೆಂದು ಸೈಬರ್ ಕ್ರೈಂ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿತು.

ಏಳು ದಿನಗಳೊಳಗಾಗಿ ಸೈಬರ್ ಕ್ರೈಂ ಅಧಿಕಾರಿಗಳ ವಿಚಾರಣೆಗೆ ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರು ಹಾಜರಾಗಬೇಕೆಂದು ನ್ಯಾಯಪೀಠ ನಿರ್ದೇಶನ ನೀಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲರು, ಬಿ.ಎಸ್.ಯಡಿಯೂರಪ್ಪ ಹಾಗೂ ಅನಂತಕುಮಾರ್ ಅವರಿಗೆ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಿರುವ ಮಾತುಕತೆಗೆ ಸಂಬಂಧಪಟ್ಟಂತೆ ಧ್ವನಿ ಪರೀಕ್ಷೆಗಾಗಿ ಹಾಜರಾಗಬೇಕೆಂದು ಸೈಬರ್ ಕ್ರೈಂ ಅಧಿಕಾರಿಗಳು ನೋಟಿಸ್ ನೀಡಿದ್ದರೂ ಹಾಜರಾಗಿಲ್ಲ. ಹೀಗಾಗಿ, ಹಾಜರಾಗುವಂತೆ ನಿರ್ದೇಶನ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಈ ನಿರ್ದೇಶನ ನೀಡಿತು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತಕುಮಾರ್ ಅವರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಿರುವ ಬಗ್ಗೆ ಸಂಭಾಷಣೆ ನಡೆಸಿದ್ದಾರೆ ಎನ್ನುವ ಸಿಡಿಯನ್ನು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಬಿಡುಗಡೆಗೊಳಿಸಿ, ಸೈಬರ್ ಕ್ರೈಂಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಧ್ವನಿ ಪರೀಕ್ಷೆಗೆ ಹಾಜರಾಗಲು ಬಿಎಸ್‌ವೈ ಹಾಗೂ ಯಡಿಯೂರಪ್ಪಗೆ ಸೈಬರ್ ಕ್ರೈಂನವರು ನೋಟಿಸ್ ನೀಡಿದ್ದರೂ ಹಾಜರಾಗಿರಲಿಲ್ಲ. ಹೀಗಾಗಿ, ಸೈಬರ್ ಕ್ರೈಂನ ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News