ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕಕ್ಕೆ ಸಿಗದ ಅಂಕಿತ: ಸರಕಾರದ ವಿರುದ್ಧ ಶಾಸಕ ಕೆ.ಶಿವಮೂರ್ತಿ ಅಸಮಾಧಾನ
ಬೆಂಗಳೂರು, ಮೇ 6: ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕವನ್ನು ಈವರೆಗೆ ರಾಜ್ಯಪಾಲರ ಅಂಕಿತ ಪಡೆಯಲು ಕಳುಹಿಸಿಕೊಡದ ಸರಕಾರದ ನಿಲುವಿಗೆ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಶಿವಮೂರ್ತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಜೆಟ್ ಅಧಿವೇಶನದ ಸಂದರ್ಭದಲ್ಲಿ ‘ವಾಸಿಸುವವನೇ ನೆಲದ ಒಡೆಯ’ ಎಂಬ ಆಶಯದೊಂದಿಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ವಿಧೇಯಕವನ್ನು ಈವರೆಗೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ಕೊಡದಿರುವುದು ಸರಿಯಲ್ಲ ಎಂದರು.
ಈ ವಿಧೇಯಕಕ್ಕೆ ನಮ್ಮ ಪಕ್ಷದ ಕೆಲವು ಶಾಸಕರು ವಿರೋಧಿಸಿದ್ದರು. ಆದರೂ, ಸರಕಾರ ದಿಟ್ಟ ನಿಲುವಿನೊಂದಿಗೆ ಸದನದ ಎದುರು ಮಂಡಿಸಿತು. ವಿಧಾನಮಂಡಲದ ಉಭಯ ಸದನಗಳಲ್ಲಿ ವಿಧೇಯಕ ಅಂಗೀಕಾರಗೊಂಡ 7 ದಿನಗಳಲ್ಲಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಬೇಕು. ಆದರೆ, 2 ತಿಂಗಳು, 10 ದಿನಗಳಾದರೂ ಈವರೆಗೆ ವಿಧೇಯಕವನ್ನು ರಾಜ್ಯಪಾಲರಿಗೆ ಕಳುಹಿಸಿಕೊಡದಿರಲು ಕಾರಣವೇನು ಎಂದು ಅವರು ಪ್ರಶ್ನಿಸಿದರು.
ವಿಧಾನಮಂಡಲದಲ್ಲಿ ಅಂಗೀಕಾರಗೊಂಡ ವಿಧೇಯಕವನ್ನು ರಾಜ್ಯಪಾಲರಿಗೆ ಕಳುಹಿಸುವುದನ್ನು ಬಿಟ್ಟು, ಕಾನೂನು ಇಲಾಖೆಯು ಅಡ್ವೊಕೇಟ್ ಜನರಲ್‌ಗೆ ಕಳುಹಿಸಿಕೊಟ್ಟಿದ್ದೇಕೆ. ಸದನ ದೊಡ್ಡದೋ, ಅಡ್ವೊಕೇಟ್ ಜನರಲ್ ದೊಡ್ಡವರೋ, ಈ ವಿಚಾರದ ಕುರಿತು ಈಗಾಗಲೆ ಮುಖ್ಯಮಂತ್ರಿ ಬಳಿ ಮಾತನಾಡಿದ್ದೇನೆ, ಕಾನೂನು ಸಚಿವರು ಬಾಯಿ ಬಿಡುತ್ತಿಲ್ಲ ಎಂದು ಶಿವಮೂರ್ತಿ ಬೇಸರ ವ್ಯಕ್ತಪಡಿಸಿದರು.
2013ರಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ನಾವು ಸತತವಾಗಿ ಹೋರಾಟ ಮಾಡಿಕೊಂಡ ಫಲವಾಗಿ ಈ ವಿಧೇಯಕ ಮಂಡನೆಯಾಗಿ ಅಂಗೀಕಾರ ಪಡೆದುಕೊಂಡಿದೆ. ರಾಜ್ಯ ಸರಕಾರವು ಆದಷ್ಟು ಶೀಘ್ರದಲ್ಲಿ ವಿಧೇಯಕವನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡದಿದ್ದರೆ, ಹೈಕಮಾಂಡ್‌ಗೆ ದೂರು ನೀಡಲು ಹಿಂಜರಿಯುವುದಿಲ್ಲ ಎಂದು ಶಿವಮೂರ್ತಿ ಎಚ್ಚರಿಕೆ ನೀಡಿದರು.