8 ಲಕ್ಷ ರೂ.ಮೌಲ್ಯದ ಚೆಕ್ಕುಗಳನ್ನು ಹಿಂದಿರುಗಿಸಿದ ಶಕೀಲ್ ಮುಲ್ಲಾರಿಗೆ ಸನ್ಮಾನ
ಧಾರವಾಡ, ಮೇ 6: ಸುಮಾರು 8 ಲಕ್ಷ ರೂ.ಮೌಲ್ಯದ ಚೆಕ್ಕುಗಳನ್ನು ಅದರ ವಾರಸುದಾರರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದ ಧಾರವಾಡದ ಪತ್ರಕರ್ತ ಶಕೀಲ್ ಮುಲ್ಲಾರಿಗೆ ಶನಿವಾರ ಮಹಾನಗರ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಸನ್ಮಾನಿಸಿದರು.
ಸಾಧನಕೇರಿಯ ಶಿವಾನಂದ ಯಳವತ್ತಿ ಎಂಬವರು ಮಿನಿ ವಿಧಾನಸೌಧದ ಬಳಿ ಒಂದು ಲಕ್ಷ ರೂ. ಮೊತ್ತದ 8 ಚೆಕ್ಕುಗಳ ಜೊತೆಗೆ ಕಿತ್ತೂರು ಬಳಿ ಖರೀದಿಸಿದ್ದ ಜಮೀನಿನ ಖರೀದಿ ಪತ್ರವನ್ನು ಕಳೆದುಕೊಂಡಿದ್ದರು.
ದಾರಿಯಲ್ಲಿ ಬಿದ್ದಿದ್ದ ಬ್ಯಾಗನ್ನು ಪರಿಶೀಲಿಸಿದ ಶಕೀಲ್ ಮುಲ್ಲಾ, ತಕ್ಷಣ ಎಸ್‌ಬಿಐ ಬ್ಯಾಂಕಿಗೆ ಹೋಗಿ ಚೆಕ್ ಮೇಲಿದ್ದ ಖಾತೆಯ ಸಂಖ್ಯೆಯ ವಿವರಣೆಯನ್ನು ತೆಗೆಸಿ ಶಿವಾನಂದರಿಗೆ ಕರೆ ಮಾಡಿ ಕಳೆದುಹೋಗಿದ್ದ ಚೆಕ್ ಗಳು ಸೇರಿದಂತೆ ಬ್ಯಾಗನ್ನು ಹಿಂದಿರುಗಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಾಮಾಣಿಕತೆ ಮೆರೆದ ಶಕೀಲ್ ಮುಲ್ಲಾರನ್ನು ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಸನ್ಮಾನಿಸಿ, ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಡಿಸಿಪಿ ಬಾಲದಂಡಿ ಸೇರಿದಂತೆ, ಚೆಕ್ಕುಗಳನ್ನು ಕಳೆದುಕೊಂಡಿದ್ದ ಶಿವಾನಂದ ಯಳವತ್ತಿ ಹಾಜರಿದ್ದರು.