×
Ad

​ಯುವ ಸಮೂಹಕ್ಕೆ ಉದ್ಯೋಗ ಮೇಳ ಸಹಕಾರಿ: ಪ್ರಕಾಶ್ ರೈ

Update: 2017-05-07 17:48 IST

ಬೆಂಗಳೂರು, ಮೇ 6: ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದರಲ್ಲೂ ಪ್ರಮುಖವಾಗಿ ಯುವಕರಿಗೆ ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಉದ್ಯೋಗ ಮೇಳಗಳ ಆಯೋಜನೆಯು ಆರೋಗ್ಯಕರವಾದದ್ದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ನಟ ಪ್ರಕಾಶ್ ರೈ ಅಭಿಪ್ರಾಯಪಟ್ಟಿದ್ದಾರೆ.

ನಗರದ ಚಾಮರಾಜಪೇಟೆಯಲ್ಲಿರುವ ಟಿಪ್ಪುಸುಲ್ತಾನ್ ಬೇಸಿಗೆ ಅರಮನೆ ಹಿಂಭಾಗದ ಹಳೆ ಕೋಟೆ ಪ್ರೌಢಶಾಲೆ ಆವರಣದಲ್ಲಿ ಶಾಸಕ ಝಮೀರ್‌ ಅಹ್ಮದ್‌ ಖಾನ್ ಆಯೋಜಿಸಿದ್ದ ‘ಬೃಹತ್ ಉಚಿತ ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸಾಕಷ್ಟು ಪ್ರತಿಭೆಗಳಿವೆ, ಕೌಶಲ್ಯಭರಿತವಾಗಿರುವ ದೊಡ್ಡ ಯುವ ಸಮೂಹವೇ ಇದೆ. ಅಂತಹವರಿಗೆ ಏನಾದರೂ ನೆರವು ನೀಡಬೇಕಾದ್ದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಝಮೀರ್‌ ಅಹ್ಮದ್‌ಖಾನ್ ಆಯೋಜನೆ ಮಾಡಿರುವ ಈ ಉದ್ಯೋಗ ಮೇಳವು ವಾಸ್ತವಿಕ ಹಾಗೂ ಆರೋಗ್ಯಕರವಾದದ್ದು ಎಂದು ಅವರು ಹೇಳಿದರು.

ಪ್ರತಿಯೊಂದು ವಿದೇಶಿ ಕಂಪೆನಿಯೂ ತಲಾ 300-400 ಉದ್ಯೋಗಗಳನ್ನು ಕಲ್ಪಿಸಿಕೊಡಲು ಮುಂದೆ ಬಂದಿದೆ. ಯುವಕರಿಗೆ ಇದೊಂದು ಸುವರ್ಣ ಅವಕಾಶ. ಯುವಕರ ಸಬಲೀಕರಣದ ಬಗ್ಗೆ ಕೇವಲ ಮಾತುಗಳನ್ನಾಡುವುದಷ್ಟೇ ಅಲ್ಲ, ಈ ರೀತಿಯ ಕೆಲಸಗಳಿಂದ ಅದನ್ನು ಕಾರ್ಯಗತಗೊಳಿಸುತ್ತಿರುವುದಕ್ಕೆ ರಾಜ್ಯದ ಯುವಕರ ಪರವಾಗಿ ಝಮೀರ್‌ ಅಹ್ಮದ್‌ ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಶಾಸಕ ಝಮೀರ್‌ ಅಹ್ಮದ್‌ ಖಾನ್ ಮಾತನಾಡಿ, ಇಂದು ಕೇವಲ ಉದ್ಯೋಗ ಮೇಳವನ್ನಷ್ಟೇ ಆಯೋಜನೆ ಮಾಡಿಲ್ಲ. ಕೌಶಲ್ಯ ತರಬೇತಿಗೂ ಯುವಕರನ್ನು ಆಯ್ಕೆ ಮಾಡಲಾಗುವುದು. ಉದ್ಯೋಗ ಸಿಗದೆ ಇರುವಂತಹ ಯುವಕರಿಗೆ ಪ್ರತಿಷ್ಠಿತ ಕಂಪೆನಿಗಳು ಕನಿಷ್ಠ 3 ರಿಂದ 6 ತಿಂಗಳುಗಳ ಕಾಲ ವೇತನ ಸಹಿತವಾಗಿ ಕೌಶಲ್ಯ ತರಬೇತಿಯನ್ನು ನೀಡಲಿವೆ ಎಂದರು.

ಆನ್‌ಲೈನ್ ಮೂಲಕ ಸಮಾರು 7,500 ಮಂದಿ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನು ಹೆಚ್ಚಿನ ಮಂದಿ ನೇರವಾಗಿ ನೋಂದಣಿ ಮಾಡಿಸಿಕೊಳ್ಳಲು ಆಗಮಿಸಿದ್ದಾರೆ. ಇಂದಿನ ಉದ್ಯೋಗ ಮೇಳದಲ್ಲಿ ಕನಿಷ್ಠ 7 ಸಾವಿರ ಮಂದಿಗೆ ಉದ್ಯೋಗ ಸಿಗುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ಸೌದಿ ಅರೇಬಿಯಾದಲ್ಲಿ ಕೆಲಸ ಬೇಕಾದರೆ ಏಜೆಂಟ್‌ಗಳಿಗೆ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ಕಮಿಷನ್ ನೀಡಬೇಕಿತ್ತು. ಆದರೆ, ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾದ ಕಂಪೆನಿಯೂ ಸ್ವಯಂಪ್ರೇರಿತವಾಗಿ 400 ಮಂದಿ ಉದ್ಯೋಗ ಕಲ್ಪಿಸಲು ಮುಂದೆ ಬಂದಿದೆ ಎಂದು ಝಮೀರ್‌ಅಹ್ಮದ್ ತಿಳಿಸಿದರು.

ಜೊತೆಗೆ, ವಿಪ್ರೋ, ಇನ್‌ಫೋಸಿಸ್, ಟೊಯೋಟಾ, ವೊಡಾಪೋನ್, ಡಾಮಿನೋಸ್, ಅಶೋಕ್ ಲೈಲಾಂಡ್ ಸೇರಿದಂತೆ ದೇಶ ವಿದೇಶಗಳ ಸುಮಾರು 150 ಕಂಪೆನಿಗಳು ಇಂದಿನ ಮೇಳದಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸಲು ಮುಂದೆ ಬಂದಿವೆ. ಹಿರಿಯ ನಟ ಪ್ರಕಾಶ್ ರೈ ಸ್ವಯಂಪ್ರೇರಿತರಾಗಿ ಈ ಉದ್ಯೋಗ ಮೇಳ ಉದ್ಘಾಟನೆಗೆ ಬಂದಿದಕ್ಕೆ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

"ಈ ಉದ್ಯೋಗ ಮೇಳದ ಆಯೋಜನೆಯಲ್ಲಿ ಕೇವಲ ನಾನೊಬ್ಬನೆ ಶ್ರಮಿಸಿಲ್ಲ. ನನ್ನ ಜೊತೆ ಮುಖಂಡರಾದ ಶಕೀಲ್ ನವಾಝ್, ಆರೀಫ್‌ಪಾಷ, ಇಮ್ರಾನ್‌ಪಾಷ, ಅಯ್ಯೂಬ್‌ಖಾನ್, ಅಮೀರ್, ಗೋವಿಂದ ಸೇರಿದಂತೆ ಇನ್ನಿತರ ಎಲ್ಲ ಮುಖಂಡರು ಶ್ರಮಿಸಿದ್ದಾರೆ. ಈ ಮೇಳದ ಶ್ರೇಯ ಅವರೆಲ್ಲರಿಗೂ ಸಲ್ಲಿಸಬೇಕು" ಎಂದು ಝಮೀರ್ ಅಹ್ಮದ್‌ಖಾನ್ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News