×
Ad

ಕಲಬುರಗಿ ಕೇಂದ್ರಿಯ ವಿವಿಗೆ ಡಾ.ಅಂಬೇಡ್ಕರ್ ಹೆಸರು: ಉನ್ನತ ಶಿಕ್ಷಣ ಸಚಿವ ರಾಯರೆಡ್ಡಿ

Update: 2017-05-07 17:52 IST

ಬೆಂಗಳೂರು, ಮೇ 7: ಕಲಬುರಗಿ ವಿಶ್ವವಿದ್ಯಾಲಯಕ್ಕೆ ವಚನಕಾರ ಬಸವಣ್ಣನ ಹೆಸರು ಮತ್ತು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿಡಲು ಕೇಂದ್ರ ಸರಕಾರದಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಆಚರಣೆ ಹಾಗೂ ‘ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲಬುರಗಿಯ ಎರಡು ವಿವಿಗಳಲ್ಲಿಗೆ ಬಸವಣ್ಣ ಮತ್ತು ಅಂಬೇಡ್ಕರ್ ಅವರ ಹೆಸರಿಡಲು ಒಪ್ಪಿಗೆ ಸಿಕ್ಕಿದ್ದು, ಕೇಂದ್ರದಿಂದ ಅಧಿಕೃತ ಆದೇಶ ಬಾಕಿಯಿದೆ ಎಂದರು.

ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಅಳವಡಿಕೆಗೆ ಆದೇಶ ಹೊರಡಿಸಲಾಗಿದೆ. ಈ ಭಾವಚಿತ್ರಗಳಲ್ಲಿ ಬಸವಣ್ಣನ ವಚನದ ಸಂದೇಶವೊಂದನ್ನು ಬಳಸುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸಂಸತ್ ಆವರಣದಲ್ಲಿ ವಚನಕಾರ ಬಸವಣ್ಣನ ಪುತ್ಥಳಿಯ ಮಾದರಿಯಲ್ಲಿ ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸಲು ಸರಕಾರದ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, ಬಸವಣ್ಣನವರ ಅನುಭವ ಮಂಟಪ ವಿಶ್ವದ ಎಲ್ಲ ಸಂಸತ್ತುಗಳ ಜನನಿ. ಜನರ ಸಮಸ್ಯೆಗಳನ್ನು ಅರಿಯಲು ವಿಚಾರ ಮಂಡನೆ, ಚಿಂತನ ಮಂಥನ ಮಾಡಲು ಅನುಭವ ಮಂಟಪದ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು ಎಂದರು.

ಬಸವ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆರ್ಟ್ ಆಫ್ ಲಿವೀಂಗ್‌ನ ಸಂಸ್ಥಾಪಕ ರವಿಶಂಕರ್ ಗುರೂಜಿ ಮಾತನಾಡಿ, ಜಗತ್ತಿನಲ್ಲಿರುವ ಮೌಢ್ಯ ಮತ್ತು ಅಂಧವಿಶ್ವಾಸವನ್ನು ದೂರ ಮಾಡಲು ಬಸವಣ್ಣನವರ ವಚನಗಳಲ್ಲಿನ ವೈಚಾರಿಕತೆಯ ಆಧ್ಯಾತ್ಮಕತೆ ವಿಶ್ವಕ್ಕೆ ಅಗತ್ಯವಿದೆ. ರಾಜ್ಯದ ಪ್ರತಿ ಬಸ್‌ಗಳಲ್ಲಿ ಮತ್ತು ಪಠ್ಯ ಪುಸ್ತಕಗಳಲ್ಲಿ ವಚನಗಳ ಸಂದೇಶವನ್ನು ಬಳಸಿಕೊಳ್ಳಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್ ಅವರಿಗೆ ಪ್ರದಾನಿಸಲಾಯಿತು. ಈ ವೇಳೆ ಸಿದ್ಧಗಂಗಾಮಠದ ಸಿದ್ಧಲಿಂಗಮಹಾಸ್ವಾಮಿ, ನಿವೃತ್ತ ನ್ಯಾಯಧೀಶ ಡಾ.ಎಂ.ಎನ್. ವೆಂಕಟಾಚಲಯ್ಯ, ಬಸವ ವೇದಿಕೆಯ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News