×
Ad

ಅಪರಾಧ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ನೀಡಲು ಹಣದ ಕೊರತೆ

Update: 2017-05-07 18:38 IST

ಬೆಂಗಳೂರು, ಮೇ 7: ಅತ್ಯಾಚಾರ, ಆ್ಯಸಿಡ್ ದಾಳಿ, ಕೊಲೆ ಸೇರಿ ವಿವಿಧ ಅಪರಾಧ ಪ್ರಕರಣಗಳ ಸಂತ್ರಸ್ತರಾದ ಮಹಿಳೆಯರಿಗೆ ಪರಿಹಾರ ನೀಡಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ(ಕೆಎಸ್‌ಎಲ್‌ಎಸ್‌ಎ) ಬಳಿ ಹಣವೇ ಇಲ್ಲವಾಗಿದೆ.

ವರ್ಷದಿಂದ ವರ್ಷಕ್ಕೆ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ ಅಡಿಯಲ್ಲಿ ಆರ್ಥಿಕ ಪರಿಹಾರ ಕೋರಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ದೌರ್ಜನ್ಯಕ್ಕೆ ಒಳಗಾದವರ ಬದುಕಿಗೆ ನೆರವಾಗಲು ಅನುದಾನದ ಕೊರತೆ ಕಾಡತೊಡಗಿದೆ. 2016-17ನೆ ಸಾಲಿನಲ್ಲಿ ಈವರೆಗೆ 125 ಪ್ರಕರಣಗಳಲ್ಲಿ 2.14 ಕೋಟಿ ರೂ. ಪರಿಹಾರ ನೀಡಲಾಗಿದೆ. ಇನ್ನೂ 142 ಪ್ರಕರಣಗಳಲ್ಲಿ ಸಂತ್ರಸ್ತರಿಗೆ 2.30 ಕೋಟಿ ರೂ.ಗೂ ಅಧಿಕ ಪರಿಹಾರದ ಮೊತ್ತ ಘೋಷಿಸಲಾಗಿದೆ.

2017-18ನೆ ಸಾಲಿನ ಪರಿಹಾರ ನಿಧಿಗೆ ಸರಕಾರ 2 ಕೋಟಿ ರೂ.ಅನುದಾನ ಘೋಷಿಸಿದೆ. ಈ ಹಣ ಬಿಡುಗಡೆಯಾಗುತ್ತಿದ್ದಂತೆ ಹಿಂದಿನ ವರ್ಷದ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಪರಿಹಾರ ನೀಡಬೇಕು. ಇದರಿಂದ, ಮತ್ತೆ ಹಣದ ಅಭಾವ ಉಂಟಾಗಲಿದ್ದು, ಈ ವರ್ಷದ ಅಪರಾಧ ಪ್ರಕರಣಗಳ ಸಂತ್ರಸ್ತರು ಪರಿಹಾರಕ್ಕಾಗಿ ಮತ್ತೊಂದು ವರ್ಷ ಕಾಯಬೇಕು. 5 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹಣದ ಕೊರತೆ ಉಂಟಾಗಿದ್ದು, ಸರಿದೂಗಿಸಲು ಹೆಚ್ಚುವರಿ 1.5 ಕೋಟಿ ರೂ.ಹಣ ಬಿಡುಗಡೆ ಮಾಡುವಂತೆ ಕೆಎಸ್‌ಎಲ್‌ಎಸ್‌ಎ ಸರಕಾರಕ್ಕೆ ಬೇಡಿಕೆ ಸಲ್ಲಿಸಿದೆ.

ಯಾರಿಗೆ ಹೇಗೆ ಪರಿಹಾರ: ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಾರಣಾಂತಿಕ ಹಲ್ಲೆ, ಮಾನವ ಕಳ್ಳಸಾಗಣೆ, ಆ್ಯಸಿಡ್ ದಾಳಿಗೆ ತುತ್ತಾದವರಿಗೆ, ಕೊಲೆ ಪ್ರಕರಣಗಳಲ್ಲಿ ಕೊಲೆಯಾದ ವ್ಯಕ್ತಿಯ ಅವಲಂಬಿತರಿಗೆ ಪರಿಹಾರ ಕಲ್ಪಿಸಲಾಗುತ್ತದೆ. ಅಪರಾಧ ಕೃತ್ಯಗಳ ಆರೋಪಿ ಪತ್ತೆಯಾಗದಿದ್ದರೂ, ಸಂತ್ರಸ್ತರೆಂದು ಗುರುತಿಸಲ್ಪಟ್ಟವರಿಗೆ ತಕ್ಷಣ ಪರಿಹಾರ ಕಲ್ಪಿಸಲು ಅವಕಾಶವಿದೆ.

ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್, ವೈದ್ಯಕೀಯ ವರದಿ, ಕೊಲೆ ಪ್ರಕರಣಗಳಾಗಿದ್ದಲ್ಲಿ ಮರಣೋತ್ತರ ಪರೀಕ್ಷೆ ವರದಿಯೊಂದಿಗೆ ಸಂತ್ರಸ್ತರ ಗುರುತಿನ ಚೀಟಿ ಪರಿಶೀಲಿಸಿ ಪರಿಹಾರ ನೀಡಲಾಗುತ್ತದೆ. ಪರಿಹಾರ ಕೋರಿ ಸಲ್ಲಿಸುವ ಅರ್ಜಿಗಳನ್ನು ಆಯಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಪರಿಶೀಲಿಸಿ ನಂತರ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಧ್ಯಂತರ ಅಥವಾ ಅಂತಿಮ ಪರಿಹಾರಕ್ಕೆ ಶಿಫಾರಸು ಮಾಡುತ್ತವೆ. ಸುಳ್ಳು ಮಾಹಿತಿ ಒದಗಿಸಿ ಪರಿಹಾರ ಪಡೆದುಕೊಂಡರೆ ಪರಿಹಾರ ಮೊತ್ತವನ್ನು ವಾರ್ಷಿಕ ಶೇ.15ರ ಬಡ್ಡಿಯೊಂದಿಗೆ ಹಿಂಪಡೆಯಲಾಗುತ್ತದೆ.

ಏನಿದು ಯೋಜನೆ: ಈ ಮೊದಲು ಸಂತ್ರಸ್ತರಿಗೆ ಪರಿಹಾರ ಸಿಗಬೇಕಾದರೆ ಪ್ರಕರಣದ ಆರೋಪಿಯ ವಿರುದ್ಧದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಬೇಕಿತ್ತು. ನಂತರ ಅಪರಾಧಿಯಿಂದ ನ್ಯಾಯಾಲಯವೇ ಸಂತ್ರಸ್ತರಿಗೆ ಪರಿಹಾರ ಕೊಡಿಸುತ್ತಿತ್ತು. ಆದರೆ, ಹೊಸದಿಲ್ಲಿಯಲ್ಲಿ ಸಂಭವಿಸಿದ ನಿರ್ಭಯಾ ಪ್ರಕರಣದ ಬಳಿಕ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್ ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕಿರುವುದು ರಾಜ್ಯ ಸರಕಾರಗಳ ಹೊಣೆ. ಹೀಗಾಗಿ ಯಾವುದೇ ಅಪರಾಧ ಕೃತ್ಯ ಸಂಭವಿಸಿದರೆ ಸಂತ್ರಸ್ತರಿಗೆ ರಾಜ್ಯ ಸರಕಾರವೇ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದಿತ್ತು. 2012ರಲ್ಲಿ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ ಜಾರಿಗೆ ತರಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News