ಮನೆಯ ಕಬೋರ್ಡ್‌ನಲ್ಲಿ ಕೊಳೆತ ಶವ ಪತ್ತೆ
ಬೆಂಗಳೂರು, ಮೇ 7: ಖಾಲಿ ಮನೆಯೊಂದರ ಕಬೋರ್ಡ್‌ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾದ ಘಟನೆ ಇಲ್ಲಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಗೇರಿ ಉಪನಗರದ ಗಾಂಧಿನಗರದಲ್ಲಿರುವ ನವೀನ್ ಎಂಬವರ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ಕೆಂಗೇರಿ ಉಪನಗರದ ಗಾಂಧಿನಗರದಲ್ಲಿ ನವೀನ್ ಅವರು ಮನೆ ಹೊಂದಿದ್ದು, ಸಂಜಯ್ ಎಂಬವರಿಗೆ ಬಾಡಿಗೆಗೆ ಕೊಟ್ಟಿದ್ದರು. 2016ರ ಮೇ ತಿಂಗಳಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ಸಂಜಯ್ ಜೊತೆಯಲ್ಲಿ ತಾಯಿ ಹಾಗೂ ವೃದ್ಧೆಯೊಬ್ಬರು ವಾಸವಾಗಿದ್ದರು. ಫೆಬ್ರವರಿ ತಿಂಗಳಿನಲ್ಲಿ ಸಂಜಯ್ ಮನೆಗೆ ಬೀಗ ಹಾಕಿ ಹೋಗಿದ್ದು, ಇದುವರೆಗೂ ವಾಪಸ್ ಆಗಿಲ್ಲ. ಮಾಲಕ ನವೀನ್ ಅವರ ಮನೆಗೆ ಅತಿಥಿಗಳು ಬಂದ ಹಿನ್ನಲೆಯಲ್ಲಿ ಬಾಡಿಗೆ ಮನೆಯ ಬಾಗಿಲು ತೆಗೆದು ಒಳಗೆ ಹೋದಾಗ ದುರ್ವಾಸನೆ ಬಂದಿದೆ.
ಮನೆಯೊಳಗೆ ಪರಿಶೀಲಿಸಿದಾಗ ಸಿಮೆಂಟ್‌ನಿಂದ ಕಬೋರ್ಡ್‌ವೊಂದನ್ನು ನಿರ್ಮಿಸಿದ್ದು ಪಕ್ಕದಲ್ಲೇ ಪ್ಲಾಸ್ಟಿಕ್ ಡ್ರಮ್ ಸಹ ಇರುವುದು ಪತ್ತೆಯಾಗಿದೆ. ಅನುಮಾನದಿಂದ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಕಬೋರ್ಡ್ ಒಡೆದು ಪರಿಶೀಲಿಸಿದಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ದೇಹವೊಂದು ಪತ್ತೆಯಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾಗಿರುವ ಸಂಜಯ್ ಗಾಗಿ ಶೋಧ ನಡೆಸುತ್ತಿದ್ದಾರೆ.