​ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಡಾ.ಜಿ.ಪರಮೇಶ್ವರ್

Update: 2017-05-08 12:34 GMT

ಬೆಂಗಳೂರು, ಮೇ 8: 2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್‌ನ ನೂತನ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದ ತಂಡಕ್ಕೆ ಸ್ವಾಗತ ಕೋರಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಸ್ವಂತ ಶಕ್ತಿಯ ಆಧಾರದಲ್ಲಿ ಅಧಿಕಾರಕ್ಕೆ ತರಬೇಕು ಎಂಬುದು ನಮ್ಮ ಗುರಿ. ಕೆ.ಸಿ.ವೇಣುಗೋಪಾಲ್ ನೇತೃತ್ವದ ತಂಡವು, ರಾಜ್ಯ ಕಾಂಗ್ರೆಸ್‌ಗೆ ಹೊಸ ಉತ್ಸಾಹ, ಚೈತನ್ಯ ತುಂಬಲಿದೆ. ಎಲ್ಲ ಮುಖಂಡರು, ನಾಯಕರು ಒಂದಾಗಿ 2018ರಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದು ಅವರು ಹೇಳಿದರು.

ಈ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವಿಜಯ್‌ಸಿಂಗ್ ಮೂರುವರೆ ವರ್ಷಗಳ ಕಾಲ ನಮಗೆ ಅಗತ್ಯವಾದ ಮಾರ್ಗದರ್ಶನ ನೀಡಿದ್ದಾರೆ. ವೇಣುಗೋಪಾಲ್ ಪಕ್ಷ ಸಂಘಟನೆಯಲ್ಲಿ ನಿಪುಣರಾಗಿದ್ದು, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವ ಅನುಭವವಿದೆ. ನಮ್ಮನ್ನೆಲ್ಲ ಒಂದು ತಂಡವನ್ನಾಗಿಸಿ ಮುಂದುವರಿಸಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ: ಕೆಪಿಸಿಸಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು, ನೂತನ ಉಸ್ತುವಾರಿಗಳಿಗೆ ಯಾವ ಮಾನದಂಡವನ್ನು ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದರು.

ಪಕ್ಷ ಸಂಘಟನೆಗೆ ಅವರದೇ ಆದ ರೀತಿಯಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾಗಲು ಇನ್ನೂ 331 ದಿನಗಳು ಮಾತ್ರ ಬಾಕಿಯಿದೆ. ಈ ಹಂತದಲ್ಲಿ ರಾಜ್ಯ ಉಸ್ತುವಾರಿಗಳ ಬದಲಾವಣೆಯಲ್ಲಿ ಯಾವುದೇ ತಪ್ಪಿಲ್ಲ. ಬೇರೆ ರಾಜ್ಯಗಳಲ್ಲಿಯೂ ಉಸ್ತುವಾರಿಗಳನ್ನು ಬದಲಾವಣೆ ಮಾಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಗತ್ಯಕ್ಕೆ ಅನುಗುಣವಾಗಿ ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ನಮ್ಮಲ್ಲಿ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಅಭಿಪ್ರಾಯಗಳಿರಬಹುದು. ಆದರೆ, ಭಿನ್ನಮತವಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವು ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರವಾಗುತ್ತದೆ ಎಂದು ಅವರು ಹೇಳಿದರು.

"ಹೈಕಮಾಂಡ್ ಮಟ್ಟದಲ್ಲಿ ಏನು ಚರ್ಚೆ ನಡೆದಿದೆ ಎಂಬುದು ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಚರ್ಚೆಯಾಗುತ್ತಿದೆ. ಈ ಕ್ಷಣದವರೆಗೆ ನಾನು ಅಧ್ಯಕ್ಷನಾಗಿದ್ದೇನೆ. ಬದಲಾವಣೆ ಆಗುತ್ತದೆಯೋ ಇಲ್ಲವೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ" ಎಂದು ಪರಮೇಶ್ವರ್ ತಿಳಿಸಿದರು.

"ನಾನು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವರ ಸ್ಥಾನದಲ್ಲಿ ಮುಂದುವರೆದಿರುವ ಬಗ್ಗೆ ಕೆಲವು ಮಾತುಗಳು ಕೇಳಿ ಬಂದಿವೆ. ನಾನು ಎರಡು ಸ್ಥಾನಗಳನ್ನು ನಿರ್ವಹಿಸುವಲ್ಲಿ ಸಮರ್ಥನಾಗಿದ್ದೇನೆ ಎಂಬ ನಂಬಿಕೆ ಮೇಲೆ, ಹೈಕಮಾಂಡ್ ಜವಾಬ್ದಾರಿ ನೀಡಿದೆ" ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News