ದಲಿತರ ಬುದ್ಧಿವಂತಿಕೆಯಿಂದ ಮೇಲ್ವರ್ಗದವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ: ಡಾ.ಸಿದ್ದಲಿಂಗಯ್ಯ

Update: 2017-05-08 15:21 GMT

ಬೆಂಗಳೂರು, ಮೇ 8: ಕೇಂದ್ರದ ಆಡಳಿತ ಮತ್ತು ತರಬೇತಿ ಇಲಾಖೆ ಸಲ್ಲಿಸಿರುವ ಭಡ್ತಿ ಮೀಸಲಾತಿ ಕಡ್ಡಾಯಗೊಳಿಸಬೇಕೆನ್ನುವ ಶಿಫಾರಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಅಂಗೀಕರಿಸಬೇಕೆಂದು ದಲಿತ ಕವಿ ಡಾ.ಸಿದ್ದಲಿಂಗಯ್ಯ ಇಂದಿಲ್ಲಿ ಆಗ್ರಹಿಸಿದ್ದಾರೆ.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನ ಹಕ್ಕುಗಳ ಉಳಿವಿಗಾಗಿ, ಮುಂದಿನ ಪೀಳಿಗೆಯ ರಕ್ಷಣೆಗಾಗಿ ಬೃಹತ್ ರ್ಯಾಲಿ ಮತ್ತು ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಖಾಸಗಿ ವಲಯದಲ್ಲಿ ದಲಿತರಿಗೆ ಮೀಸಲಾತಿ ನೀಡಿದರೆ, ಮೇಲ್ವರ್ಗದವರ ಬುದ್ಧಿವಂತಿಕೆಯಿಂದ ದಲಿತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಕೆಲವರು ಹೇಳಿದ್ದರು. ಆದರೆ, ಕಾಲ ಬದಲಾಗಿದೆ, ದಲಿತರ ಬುದ್ಧಿವಂತಿಕೆಯಿಂದ ಮೇಲ್ವರ್ಗದವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಸಿದ್ದಲಿಂಗಯ್ಯ ನುಡಿದರು.

ಹಿಂದಿನ ಸಾಲಿನಲ್ಲಿ ಕೇಂದ್ರ ಸರಕಾರವು ದಲಿತ ಸಮುದಾಯಗಳಿಗೆ ಭಡ್ತಿ ಮೀಸಲಾತಿ ಬೇಕು ಅಥವಾ ಬೇಡ ಎಂದು ನಿರ್ಧರಿಸಲು ಕೇಂದ್ರದ ಆಡಳಿತ ಮತ್ತು ತರಬೇತಿ ಇಲಾಖೆಗಳೊಂದಿಗೆ ಸಮಿತಿ ರಚನೆ ಮಾಡಿತ್ತು. ಇತ್ತೀಚಿಗೆ ಸಮಿತಿಯೂ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು, ದಲಿತರಿಗೆ ಭಡ್ತಿ ಮೀಸಲಾತಿ ಕಡ್ಡಾಯಗೊಳಿಸಬೇಕೆಂದು ಸೂಚಿಸಿದೆ. ಹೀಗಾಗಿ, ಕೇಂದ್ರ ಸರಕಾರವೂ ಸಮಿತಿಯ ಶಿಫಾರಸ್ಸು ಅಂಗೀಕರಿಸಬೇಕೆಂದು ಒತ್ತಾಯಿಸಿದರು.

‘ಅದಕ್ಷತೆ’ಯಿಂದ ಉನ್ನತ ಸ್ಥಾನ ನೀಡಿದಾಗ, ಆಡಳಿತದಲ್ಲಿ ಅದಕ್ಷತೆ ಕಂಡುಬರುತ್ತದೆ ಎಂದು ದಲಿತರ ಬಗ್ಗೆ ಮಾತಿದೆ. ಆದರೆ, ಇದು ಅರ್ಥವಿಲ್ಲದ ಮಾತು. ಇದರಿಂದ ಸ್ವಾಭಿಮಾನಕ್ಕೆ ಪೆಟ್ಟು ಬಿದಿದ್ದು, ಎಲ್ಲರೂ ಖಂಡಿಸಬೇಕೆಂದ ಅವರು, ಭಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದಲಿತ ವಿರೋಧಿ ಎಂದು ಟೀಕಿಸಿದರು.

ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಮಾತನಾಡಿ, ರಾಜ್ಯ ಸರಕಾರ 2002ರ ಸಾಂದರ್ಭಿಕ ಜೇಷ್ಠತೆಯ ಕಾಯ್ದೆಗೆ ತಿದ್ದುಪಡಿ ತಂದು ಎಸ್ಸಿ-ಎಸ್ಟಿ ನೌಕರರ ಮುಂಭಡ್ತಿ ಸಂರಕ್ಷಿಸಲು ಸುಗ್ರೀವಾಜ್ಞೆ ಹೊರಡಿಸಬೇಕು. ಲೋಕಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಸಂವಿಧಾನದ 117ನೆ ತಿದ್ದುಪಡಿಯನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಬೇಕು ಹಾಗೂ ಎಲ್ಲ ಸಂಸದರು ಬೆಂಬಲ ಸೂಚಿಸಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಪ್ರಾಂತ ರೈತ ಸಂಘದ ನಿಕಟಪೂರ್ವ ಅಧ್ಯಕ್ಷ ಮಾರುತಿ ಮಾನ್ಪಡೆ, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಶಾಸಕ ನರೇಂದ್ರ ಸ್ವಾಮಿ, ಕೆಪಿಎಸ್ಸಿ ಸದಸ್ಯ ದಾಸಯ್ಯ, ದಲಿತಪರ ಹೋರಾಟಗಾರಾದ ಮಾವಳ್ಳಿ ಶಂಕರ್, ಎಂ.ವೆಂಕಟಸ್ವಾಮಿ, ಆರ್.ಮೋಹನ್‌ರಾಜ್, ಎಂ.ಎಲ್.ಸತ್ಯನಾರಾಯಣ, ಡಾ.ಎಸ್.ವಿಜಯಕುಮಾರ್, ಚಿತ್ರದುರ್ಗದ ಬಸವನಾಗಿ ದೇವ ಸ್ವಾಮಿ, ಬೌದ್ಧ ದಮ್ಮದ ಭಂತೇಜಿ ಸೇರಿದಂತೆ ವಿವಿಧ ಇಲಾಖೆ ನೌಕರರು ಪಾಲ್ಗೊಂಡಿದ್ದರು.

ಆಹಾರ ಪದ್ಧತಿ ಹೇರಿಕೆ: ‘ಪಠ್ಯಪುಸ್ತವೊಂದರಲ್ಲಿ ದೀಪಾವಳಿ ಹಬ್ಬಕ್ಕೆ ಏನು ಅಡುಗೆ ಮಾಡಲಾಗಿತ್ತು ಎನ್ನುವ ಪ್ರಶ್ನೆಯಿತ್ತು. ಇದಕ್ಕೆ ಮೇಲ್ವರ್ಗದ ಹುಡುಗ ಕಷ್ಟ ಇಲ್ಲದೆ ರುಚಿಯಾದ ಪಾಯಸ ಮಾಡಿದ್ದರು ಎಂದು ಉತ್ತರಿಸುತ್ತಾನೆ. ಏಕೆಂದರೆ ಆತ ಅದನ್ನು ರುಚಿ ಮಾಡಿರುತ್ತಾನೆ. ಅದೇ ದಲಿತ ಹುಡುಗ ಇದನ್ನು ಹೇಳಲು ಸಾಧ್ಯವಾಗುವುದಿಲ್ಲ. ಪಾಯಸ ಎಂದರೆ ಗೊತ್ತೇ ಇರುವುದಿಲ್ಲ. ಮೇಲ್ವರ್ಗದ ಆಹಾರ ಪದ್ಧತಿಗಳನ್ನು ಉದ್ದೇಶ ಪೂರಕವಾಗಿ ಹೇರಿಕೆ ಮಾಡಲಾಗುತ್ತಿದೆ. ಅಲ್ಲದೆ, ಅವರ ಪದ್ಧತಿಗಳನ್ನೆ ಹೇಳಿಕೊಂಡು ಜ್ಞಾನ ಎನ್ನುತ್ತಿದ್ದಾರೆ. ಆದರೆ, ದಲಿತರ ಅನುಭವ ಎಲ್ಲೂ ಉಲ್ಲೇಖ ಮಾಡುತ್ತಿಲ್ಲ’.
 

 -ಡಾ.ಸಿದ್ದಲಿಂಗಯ್ಯ, ದಲಿತ ಕವಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News