ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಬಿಜೆಪಿ ಶಾಸಕರ ವಿರೋಧ: ಸಚಿವ ಎಂ.ಆರ್.ಸೀತಾರಾಂ
ಬೆಂಗಳೂರು, ಮೇ 8: ಕೊಡಗು ಜಿಲ್ಲೆಯ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆದರೆ, ಆ ಕಾರ್ಯಕ್ಕೆ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಆರೋಪ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದಿಡ್ಡಳ್ಳಿ ನಿರಾಶ್ರಿತರನ್ನು ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ದಿಕ್ಕುತಪ್ಪಿಸುವ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಸಮಸ್ಯೆ ಪರಿಹಾರಕ್ಕೆ ತೊಡಕು ಉಂಟಾಗಿದೆ ಎಂದು ದೂರಿದರು.
ಅರಣ್ಯ ಭೂಮಿಯಲ್ಲಿ ವಾಸಿಸುತ್ತಿದ್ದ ಕಾರಣಕ್ಕೆ ದಿಡ್ಡಳ್ಳಿ ಆದಿವಾಸಿಗಳನ್ನು ಅಲ್ಲಿಂದ ತೆರವುಗೊಳಿಸಿದ್ದು, ಇದೀಗ ಅವರಿಗೆ ಬಸವನಹಳ್ಳಿ, ಜಗಮಳ್ಳೂರು, ಸಿದ್ದಾಪುರಗಳಲ್ಲಿ ನಿವೇಶನಗಳನ್ನು ಗುರುತಿಸಿ ಹಂಚುವ ಪ್ರಕ್ರಿಯೆ ಆರಂಭಿಸಲಾಗಿದೆ. ಸ್ಥಳೀಯ ಶಾಸಕರು, ಎ.ಕೆ.ಸುಬ್ಬಯ್ಯ ಮತ್ತು ಕೆಲ ಹೊರಗಿನ ವ್ಯಕ್ತಿಗಳು ನಿರಾಶ್ರಿತರಿಗೆ ಭೂಮಿ ಆಸೆ ತೋರಿಸಿ ದಿಡ್ಡಳ್ಳಿ ನಿರಾಶ್ರಿತರನ್ನು ದಾರಿ ತಪ್ಪಿಸುತ್ತಿದ್ದಾರೆ. ನಿರಾಶ್ರಿತರ ಬೇಡಿಕೆಯಂತೆ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಿಸಿರುವ ವೇಳೆ ಭೂಮಿ ನೀಡಬೇಕೆಂಬ ಕೂಗು ಕೇಳಿಬಂದಿದೆ ಎಂದರು.
ಅಸಮಾಧಾನ: ಸ್ಥಳೀಯ ಶಾಸಕರಾದ ಅಪ್ಪಚ್ಚು ರಂಜನ್, ಬೋಪಯ್ಯ ದಿಡ್ಡಳ್ಳಿ ನಿರಾಶ್ರಿತರಿಗೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸಲು ಅವಕಾಶ ಕಲ್ಪಿಸುವುದು ಸರಿಯಲ್ಲ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಸೃಷ್ಟಿಯಾದರೆ ಯಾರು ಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆಂದು ಸೀತಾರಾಂ ತಮ್ಮ ಅಳಲನ್ನು ತೋಡಿಕೊಂಡರು.
ಈಗಾಗಲೇ 750 ಮಂದಿ ನಿರಾಶ್ರಿತರಿಗೆ ನಿವೇಶನ ಸಿದ್ಧಪಡಿಸಲಾಗಿದೆ. ಲಾಟರಿ ಮೂಲಕ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಅನಾವಶ್ಯಕವಾಗಿ ಈ ಸಮಸ್ಯೆಯಲ್ಲಿ ಮತ್ತಷ್ಟು ಗೊಂದಲ ಹುಟ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ದಿಡ್ಡಳ್ಳಿ ನಿರಾಶ್ರಿತರ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ ಅವರಿಗೆ ಮನೆ ನಿರ್ಮಿಸಿಕೊಳ್ಳಲು ತಲಾ 4 ಲಕ್ಷ ರೂ.ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದ ಅವರು, ಒಂದು ವೇಳೆ ಸರಕಾರ ನೀಡಿರುವ ನಿವೇಶನಗಳಿಗೆ ತೆರಳಿ ಮನೆ ಕಟ್ಟಿಕೊಂಡು ವಾಸ ಮಾಡಲು ಮುಂದಾಗದಿದ್ದಲ್ಲಿ ಎಲ್ಲ ನಿವೇಶನಗಳನ್ನು ಜಿಲ್ಲೆಯಲ್ಲಿನ ನಿರ್ಗತಿಕರಿಗೆ ಹಂಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.