×
Ad

ಪರಮೇಶ್ವರ್ ಬದಲಾವಣೆಗೆ ಹಿರಿಯ ಸಚಿವರ ಸಲಹೆ: ಹೊಸಬರಿಗೆ ಅವಕಾಶ ನೀಡಲು ಆಗ್ರಹ

Update: 2017-05-09 19:27 IST

ಬೆಂಗಳೂರು, ಮೇ 9: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ರನ್ನು ಬದಲಾಯಿಸುವಂತೆ ರಾಜ್ಯದ ಸರಕಾರದ ಕೆಲ ಹಿರಿಯ ಸಚಿವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ರನ್ನು ಮನವಿ ಮಾಡಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸಂಘಟನೆ, ರಾಜ್ಯ ಸರಕಾರದ ಕಾರ್ಯವೈಖರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಂಬಂಧ ಸಚಿವರು, ಶಾಸಕರು ಹಾಗೂ ಸಂಸದರೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಹಿರಿಯ ಸಚಿವರಾದ ರಮೇಶ್‌ಕುಮಾರ್, ಕಾಗೋಡು ತಿಮ್ಮಪ್ಪ ಹಾಗೂ ಎಚ್.ಕೆ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಪರಮೇಶ್ವರ್ ಅವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡುವಂತೆ ವೇಣುಗೋಪಾಲ್‌ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಶ್ರೀಮಂತರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ದರ್ಪ ಪ್ರದರ್ಶಿಸುತ್ತಾರೆ. ಕಾರ್ಯಕರ್ತರು ಹಾಗೂ ಜನಸಾಮಾನ್ಯರೊಂದಿಗೆ ಬೆರೆಯುವವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಧನ ಸಚಿವ ಡಿ.ಕೆ.ಶಿವಕುಮಾರ್‌ಗೆ ಸಂಘಟನಾ ಚತುರತೆ ಇದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸೇರಿದಂತೆ ಪಕ್ಷದ ವಿವಿಧ ಹಂತಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. ಆದರೆ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಶಕ್ತಿಯಿಲ್ಲ ಎಂದು ಕೆಲವು ಸಚಿವರು, ಶಾಸಕರು ಸಲಹೆ ನೀಡಿದ್ದಾರೆ.

ಇಬ್ಬರು ಸಂಸದರು ಹಾಗೂ ಕೆಲ ಶಾಸಕರು ಪರಮೇಶ್ವರ್ ಅವರನ್ನೆ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದಿನ ಚುನಾವಣೆಯವರೆಗೆ ಮುಂದುವರೆಸುವುದು ಸೂಕ್ತ. ಹಿರಿಯ ದಲಿತ ಮುಖಂಡ ವಿ.ಶ್ರೀನಿವಾಸ್‌ಪ್ರಸಾದ್ ಕಾಂಗ್ರೆಸ್ ತ್ಯಜಿಸಿದ್ದಾರೆ. ಪರಮೇಶ್ವರ್ ಅವರನ್ನು ಈ ಹಂತದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ದಲಿತರ ಮತಗಳ ಕ್ರೋಡೀಕರಣಕ್ಕೆ ಪರಮೇಶ್ವರ್ ಮುಂದುವರೆಯವುದು ಉತ್ತಮ ಎಂದು ಕೆಲವು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಲಿಂಗಾಯತ ಮುಖಂಡರಾದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ಎಸ್.ಆರ್.ಪಾಟೀಲ್ ಸೇರಿದಂತೆ ಇನ್ನಿತರ ಪ್ರಭಾವಿಗಳನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವುದು ಸೂಕ್ತ. ಲಿಂಗಾಯತರಿಗೆ ಮಣೆ ಹಾಕುವುದರಿಂದ ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ತಡೆಯೊಡ್ಡಬಹುದು ಎಂದು ಕೆಲವು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಿಂಗಾಯತ ಸಮುದಾಯ ಹೆಚ್ಚಾಗಿರುವ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆಯಿದೆ. ಆದುದರಿಂದ, ಪ್ರಭಾವಿ ಲಿಂಗಾಯತ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೆ, ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೆಲವು ಶಾಸಕರು ಹೇಳಿದ್ದಾರೆ.

ಸಚಿವ ಸಂಪುಟದಲ್ಲಿ ನಾಲ್ಕು ವರ್ಷಗಳ ಅಧಿಕಾರ ಪೂರೈಸಿರುವವರನ್ನು ಬದಲಾಯಿಸಿ, ಹೊಸಬರಿಗೆ ಅವಕಾಶ ಕಲ್ಪಿಸಿ, ಹಿರಿಯ ಸಚಿವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳುವುದರಿಂದ ಮುಂದಿನ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಕ್ಯಾತಸಂದ್ರ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ, ಸರಕಾರದ ಕಾರ್ಯವೈಖರಿ, ಸರಕಾರದ ಯೋಜನೆಗಳು ಜನರಿಗೆ ಮುಟ್ಟಿದೆಯೇ, ಇಲ್ಲವೆ ಎಂಬ ಬಗ್ಗೆ ಮುಖಂಡರುಗಳಿಗೆ ಪ್ರಶ್ನೆ ಹಾಕಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡ ವೇಣುಗೋಪಾಲ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಹಾಗೂ ಬಿಜೆಪಿಯ ಮಿಷನ್ 150 ಗುರಿಯನ್ನು ವಿಫಲಗೊಳಿಸಲು ರೂಪಿಸಬೇಕಾದ ಕಾರ್ಯತಂತ್ರದ ಸಲಹೆಗಳನ್ನು ಪಡೆದುಕೊಂಡರು.

ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಎಂ.ಕೃಷ್ಣಪ್ಪ, ಆರ್.ವಿ.ದೇಶಪಾಂಡೆ, ಸಂಸದರಾದ ಡಿ.ಕೆ.ಸುರೇಶ್, ಮುದ್ದಹನುಮೇಗೌಡ, ಚಂದ್ರಪ್ಪ, ಧ್ರುವನಾರಾಯಣ್, ಶಾಸಕ ಮಾಲಿಕಯ್ಯ ಗುತ್ತೇದಾರ್, ಸತೀಶ್‌ಜಾರಕಿಹೊಳಿ, ಹಲವು ನಾಯಕರು ವೇಣುಗೋಪಾಲ್‌ರವರನ್ನು ಭೇಟಿ ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News